ಪಾಟ್ನಾ (ಬಿಹಾರ): ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಚಿರಾಗ್ ಪಾಸ್ವಾನ್ ಹಾಗೂ ಪಶುಪತಿ ಕುಮಾರ್ ಪರಾಸ್ ಅವರ ಬಣಗಳಿಗೆ ಹೊಸ ಹೆಸರುಗಳು ಹಾಗೂ ಚಿಹ್ನೆಗಳನ್ನು ಭಾರತೀಯ ಚುನಾವಣಾ ಆಯೋಗ ನೀಡಿದೆ. ಹೀಗಾಗಿ ಉಪಚುನಾವಣೆಯಲ್ಲಿ ಇವರಿಬ್ಬರ ಬಣಗಳು ಮುಂಬರುವ ಉಪಚುನಾವಣೆಯಲ್ಲಿ ಎಲ್‌ಜೆಪಿ ಪಕ್ಷದ 'ಬಂಗಲೆ' ಚಿಹ್ನೆಯನ್ನು ಬಳಸುವಂತಿಲ್ಲ.
ಅಕ್ಟೋಬರ್ 30ರಂದು ಬಿಹಾರದ ತಾರಾಪುರ ಮತ್ತು ಕುಶೇಶ್ವರ ಆಸ್ಥಾನ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಪಾಸ್ವಾನ್ ನೇತೃತ್ವದ ಬಣವನ್ನು 'ಹೆಲಿಕಾಪ್ಟರ್' ಚಿಹ್ನೆಯೊಂದಿಗೆ 'ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)' ಎಂದು ಗುರುತಿಸಲಾಗುತ್ತದೆ. ಪರಾಸ್ ಬಣವನ್ನು 'ಹೊಲಿಗೆ ಯಂತ್ರ'ದ ಚಿಹ್ನೆಯೊಂದಿಗೆ 'ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ' ಎಂದು ಕರೆಯಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೇಂದ್ರದ ಮಾಜಿ ಸಚಿವ ಮತ್ತು ಎಲ್‌ಜೆಪಿ ಸಂಸ್ಥಾಪಕ ದಿ.ರಾಮ್‌ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರು 2019ರಲ್ಲಿ ಐದು ವರ್ಷಗಳ ಅವಧಿಗೆ ಎಲ್‌ಜೆಪಿ ಪಕ್ಷದ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಕೆಲ ತಿಂಗಳ ಹಿಂದೆ ಅವರ ಚಿಕ್ಕಪ್ಪ ಮತ್ತು ಹಾಜಿಪುರ ಸಂಸದರಾಗಿರುವ ಪಶುಪತಿ ಕುಮಾರ್ ಪರಾಸ್ ನೇತೃತ್ವದ ಎಲ್‌ಜೆಪಿಯ ಒಂದು ಬಣವು ಪಕ್ಷದ ಮುಖ್ಯಸ್ಥ ಸ್ಥಾನದಿಂದ ಪಾಸ್ವಾನ್ರನ್ನು ತೆಗೆದುಹಾಕಿತ್ತು. ಚಿರಾಗ್ ನಾಯಕತ್ವದ ಬಗ್ಗೆ ಅವರ ಪರಸ್ ಸೇರಿದಂತೆ ಆರು ಮಂದಿ ಸಂಸದರು ಬಂಡಾಯದ ಕಹಳೆ ಮೊಳಗಿಸಿದ್ದರು. ಈ ಬಳಿಕ ಪಕ್ಷದಲ್ಲಿ ಒಳಜಗಳಗಳು ನಡುವಿನ ಭಿನ್ನಾಭಿಪ್ರಾಯಗಳು ಉತ್ತುಂಗಕ್ಕೇರುತ್ತಾ ಹೋಗಿತ್ತು.