ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಬಳಸುವ ಚಿನೂಕ್ಗಳು ಸಂಪೂರ್ಣವಾಗಿ ಉತ್ತಮವಾಗಿವೆ ಅದರಲ್ಲಿ ಯಾವುದೇ ತೊಂದರೆಗಳಿಲ್ಲ ಎಂದು ಬೋಯಿಂಗ್ ಇಂಡಿಯಾದ ಉನ್ನತ ಕಾರ್ಯನಿರ್ವಾಹಕರು ಸ್ಪಷ್ಟಪಡಿಸಿದ್ದಾರೆ. ಯುಎಸ್ ಸೇನೆಯಲ್ಲಿನ CH-47 ಹೆಲಿಕಾಪ್ಟರ್ಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಬೆಳವಣಿಗೆ ಕಂಡುಬಂದಿದೆ.
ಯುಎಸ್ನಲ್ಲಿ ಆ ಬಗ್ಗೆ ವರದಿಯಾದ ನಂತರ ಭಾರತೀಯ ವಾಯುಪಡೆ ಇಲ್ಲಿನ ಹೆಲಿಕಾಪ್ಟರ್ ಇಂಜಿನಿಯರ್ಗಳನ್ನು ಸಂಪರ್ಕಿಸಿದ್ದು ಭಾರತೀಯ ಪಡೆಗಳು ನಿರ್ವಹಿಸುವ ಹೆಲಿಕಾಪ್ಟರ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ ಎಂದು ಬೋಯಿಂಗ್ ಇಂಡಿಯಾದ ಅಧ್ಯಕ್ಷ ಸಲೀಲ್ ಗುಪ್ತೆ ತಿಳಿಸಿದ್ದಾರೆ.
ಯುಎಸ್ ಮಾಧ್ಯಮದ ವರದಿಗಳ ಪ್ರಕಾರ, ಕೆಲವು ಇಂಜಿನ್ನಿಂದ ಬೆಂಕಿ ಕಾಣಿಸಿಕೊಂಡ ನಂತರ ಯುಎಸ್ ಮಿಲಿಟರಿ ತನ್ನ CH-47 ಚಿನೂಕ್ ಹೆಲಿಕಾಪ್ಟರ್ಗಳನ್ನು ಸ್ಥಗಿತಗೊಳಿಸಿದೆ.
ಭಾರತೀಯ ವಾಯುಪಡೆಯು ಯುಎಸ್ ಸೇನೆಯ ಚಿನೂಕ್ ಹೆಲಿಕಾಪ್ಟರ್ಗಳ ಸಂಪೂರ್ಣ ಸ್ಥಗಿತಕ್ಕೆ ಇರುವ ಹಿಂದಿನ ಕಾರಣಗಳ ಬಗ್ಗೆ ಬುಧವಾರ ಅಮೆರಿಕ ಮೂಲದ ರಕ್ಷಣಾ ತಯಾರಕ ಬೋಯಿಂಗ್ನಿಂದ ವಿವರಗಳನ್ನು ಕೇಳಿದೆ.
IAF ತನ್ನ 15 ಬೋಯಿಂಗ್ ನಿರ್ಮಿತ ಚಿನೂಕ್ ಹೆಲಿಕಾಪ್ಟರ್ಗಳನ್ನು ಯುಎಸ್ನಿಂದ ಪಡೆದುಕೊಂಡಿದೆ. ಮಾರ್ಚ್ 2019 ರಲ್ಲಿ ಇವನ್ನು ಸೇವೆಗೆ ಸೇರಿಸಿಕೊಳ್ಳಲಾಗಿತ್ತು. ಭಾರತೀಯ ವಾಯುಪಡೆಯಲ್ಲಿರುವ ಈ ಚಿನೂಕ್ ಹೆಲಿಕಾಪ್ಟರ್ಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ.
ಚಿನೂಕ್ ಹೆಲಿಕಾಪ್ಟರ್ಗಳು ಉತ್ತರದಲ್ಲಿನ ಕಾರ್ಯಾಚರಣೆಗಾಗಿ ಚಂಡೀಗಢದಿಂದ ಹೊರಗಿವೆ ಹಾಗೂ ಈಶಾನ್ಯ ಪ್ರದೇಶಗಳನ್ನು ನೋಡಿಕೊಳ್ಳುವ ಮತ್ತೊಂದು ಘಟಕ ಅಸ್ಸೋಂನಲ್ಲಿದೆ.
ಇದನ್ನೂ ಓದಿ: ಇಂದಿನಿಂದ ಕೇರಳ ಪ್ರವಾಸದಲ್ಲಿ ಮೋದಿ: ನಾಳೆ ಸ್ವದೇಶಿ ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆ