ಬೀಜಿಂಗ್ (ಚೀನಾ): ಟಿಬೆಟ್‌ನಲ್ಲಿ ಚೀನಾದ ಮೊದಲ ಹಾಗೂ ಸಂಪೂರ್ಣ ವಿದ್ಯುದ್ದೀಕರಿಸಿದ ಬುಲೆಟ್ ಟ್ರೇನ್ ಶುಕ್ರವಾರ ಕಾರ್ಯರೂಪಕ್ಕೆ ತಂದಿದ್ದು, ಟಿಬೆಟ್‌ನ ಲ್ಹಾಸಾ ಮತ್ತು ಅರುಣಾಚಲ ಪ್ರದೇಶಕ್ಕೆ ಸಮೀಪವಿರುವ ನೈಂಗ್ಚಿಯನ್ನು ಈ ಬುಲೆಟ್ ಟ್ರೇನ್ ಸಂಪರ್ಕಿಸುತ್ತದೆ.
ಜುಲೈ 1ರಂದು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಶತಮಾನೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದು, ಇದಕ್ಕೂ ಮುನ್ನ ಬುಲೆಟ್ ಟ್ರೇನ್ಗೆ ಚಾಲನೆ ನೀಡಿದೆ. ಸಿಚುವಾನ್-ಟಿಬೆಟ್ ರೈಲ್ವೆ ವಿಭಾಗದ 435.5 ಕಿಲೋಮೀಟರ್ ಉದ್ದವಿರುವ ಲ್ಹಾಸಾ ಮತ್ತು ನೈಂಗ್ಚಿ ನಡುವೆ ಬುಲೆಟ್ ಟ್ರೇನ್ ಓಡಾಡಲಿದೆ. ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಫಕ್ಸಿಂಗ್ ಹೆಸರಿನ ಬುಲೆಟ್ ಟ್ರೈನ್ಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಸರ್ಕಾರದ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ನವೆಂಬರ್‌ನಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬುಲೆಟ್ ರೈಲ್ವೆ ಯೋಜನೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು, ಟಿಬೆಟ್‌ನ ಸಿಚುವಾನ್ ಪ್ರಾಂತ್ಯ ಮತ್ತು ನೈಂಗ್ಚಿಗೆ ಭೇಟಿ ನೀಡಿ, ಗಡಿಯಲ್ಲಿ ಸ್ಥಿರತೆ ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದರು. ಮೊದಲು ಸಿಚುವಾನ್ ಪ್ರಾಂತ್ಯದ ರಾಜಧಾನಿ ಚೆಂಗ್ಡೂವಿನಿಂದ ಲ್ಹಾಸಾಗೆ ಪ್ರಯಾಣ ಬೆಳೆಸಲು 48 ಗಂಟೆ ಬೇಕಾಗುತ್ತಿತ್ತು. ಈಗ ಕೇವಲ 13 ಗಂಟೆಯಲ್ಲಿ ತಲುಪಬಹುದಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಅವಶ್ಯಕತೆಗಿಂತ 4 ಪಟ್ಟು ಹೆಚ್ಚು ಆಮ್ಲಜನಕ ಸಂಗ್ರಹ: ಆಡಿಟ್ ಸಮಿತಿ
ಇನ್ನು ನೈಂಗ್ಚಿ ಅರುಣಾಚಲ ಪ್ರದೇಶದ ಗಡಿಯ ಪಕ್ಕದಲ್ಲಿರುವ ಮೆಡೋಗ್ ಪ್ರಾಂತ್ಯಕ್ಕೆ ಸಮೀಪದಲ್ಲಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಳ್ಳುತ್ತಿದ್ದು, ಭಾರತ ಚೀನಾದ ಹೇಳಿಕೆಯನ್ನು ತಿರಸ್ಕರಿಸಿದೆ.