ಬರ್ಧಮಾನ್(ಪಶ್ಚಿಮ ಬಂಗಾಳ) : ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ಸಕ್ಕರೆ ಅಥವಾ ಬೆಲ್ಲದಿಂದ ಮಾಡಲಾಗುತ್ತದೆ. ಅದರಲ್ಲೂ ಪಶ್ಚಿಮ ಬಂಗಾಳ ತನ್ನ ವಿಶಿಷ್ಟ ಬೆಂಗಾಲಿ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಸಿಹಿತಿನಿಸುಗಳಲ್ಲೇ ಜನರ ಮನಗೆದ್ದ ಖಾದ್ಯಗಳಲ್ಲೊಂದು ರಸಗುಲ್ಲಾ. ಇದನ್ನು ಸಕ್ಕರೆ ಹಾಕಿ ತಯಾರಿಸುವುದು ಸಾಮಾನ್ಯ.
ಸಿಹಿ-ತಿಂಡಿಗಳ ರಾಜನೆಂದೇ ರಸಗುಲ್ಲಾವನ್ನು ಪರಿಗಣಿಸಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದ ಬರ್ಧಮಾನ್ನಲ್ಲಿರುವ ಸಿಹಿ ಅಂಗಡಿಯ ನೇತಾಜಿ ಮ್ರಿಷ್ಟಾನ್ನ ಭಂಡಾರ್ ಅಂಗಡಿಯಲ್ಲಿ ಮಾತ್ರ ವಿಶೇಷವಾಗಿ ರಸಗುಲ್ಲಾ ತಯಾರಾಗುತ್ತದೆ. ಅಚ್ಚರಿ ಎಂಬಂತೆ ಮೆಣಸಿನಕಾಯಿ ಬಳಸಿ ರುಚಿಯಾದ ರಸಗುಲ್ಲಾ ತಯಾರಿಸಲಾಗುತ್ತದೆ.
ದಪ್ಪ ಮೆಣಸಿನಕಾಯಿ ಹಾಗೂ ಉಪ್ಪಿನಕಾಯಿ ತಯಾರಿಸಲು ಬಳಸುವ ಮೆಣಸಿನಕಾಯಿಗಳು ಮತ್ತು ಇತರ ಸಾಮಾನ್ಯ ಪದಾರ್ಥಗಳನ್ನು ಬಳಸಿ ರಸಗುಲ್ಲಾ ತಯಾರಿಸುತ್ತಾರೆ. ಇದು ಬರ್ಧಮಾನ್ ಪಟ್ಟಣದ ಕರ್ಜನ್ ಗೇಟ್‌ನ ಸಿಹಿ ಅಂಗಡಿಯಲ್ಲಿ ಭಾರಿ ಪ್ರಸಿದ್ಧಿ ಪಡೆದಿದೆ.
ಮೆಣಸಿನಕಾಯಿ ರಸಗುಲ್ಲಾಗಳನ್ನು ಮೆಣಸಿನಕಾಯಿಗಳಿಂದ ತಯಾರಿಸಲಾಗಿದ್ದರೂ ಅವು ರುಚಿಯಲ್ಲಿ ಸಿಹಿಯಾಗಿರುತ್ತವೆ ಎಂದು ತಯಾರಕರು ಹೇಳುತ್ತಾರೆ. ಆದರೆ, ಬಾಯಲ್ಲಿ ಮಾತ್ರ ಮೆಣಸಿನಕಾಯಿಯ ಸ್ವಾದ ಅನುಭವಕ್ಕೆ ಬರುತ್ತದೆ.
ನೇತಾಜಿ ಮ್ರಿಷ್ಟಾನ್ನ ಭಂಡಾರ್ನಲ್ಲಿ ಸಿಗುವ ರಸಗುಲ್ಲಾಕ್ಕೆ ಮಹಿಳೆಯರು ಹೆಚ್ಚಾಗಿ ಮನಸೋತಿರುವುದು ವಿಶೇಷ. ನೋಡಲು ಸಹ ಕಲರ್ಫುಲ್ ಆಗಿರುವ ಈ ವಿಶೇಷ ರಸಗುಲ್ಲಾ ಸ್ವಾದ ತಿಂಡಿಪ್ರಿಯರ ಮನಸೂರೆಗೊಳ್ಳದೆ ಇರದು.