ಚೆನ್ನೈ(ತಮಿಳುನಾಡು) : ಸರ್ಕಾರಿ ಅನುದಾನದ ವಸತಿ ಗೃಹದಲ್ಲಿ ವಾಸವಿದ್ದ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಾರ್ಡನ್ನೋರ್ವನನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ. ಪೋಕ್ಸೊ ಮತ್ತು ಬಾಲನ್ಯಾಯ ಕಾಯ್ದೆಗಳಡಿ ಆರೋಪಿಯನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ.
ಅನಾಥರು ಮತ್ತು ಕುಟುಂಬದಿಂದ ಹೊರ ಬಂದು ನಿರ್ಗತಿಕರಾದ ಮಕ್ಕಳಿಗಾಗಿ ಸರ್ಕಾರ ಮಕ್ಕಳ ಗೃಹಗಳನ್ನು ನಡೆಸುತ್ತಿದೆ. ತಿರುವಣ್ಣಾಮಲೈನಲ್ಲಿ ಇಂತಹ ಐದು ವಸತಿ ಗೃಹಗಳು ಇದ್ದು, ಇದರಲ್ಲಿ ಒಂದು ಗೃಹದ ವಾರ್ಡನ್ ಮಕ್ಕಳ ಮೇಲೆ ಕಳೆದ ಮೂರು ತಿಂಗಳಿಂದ 14ರಿಂದ 16 ವರ್ಷದೊಳಗಿನ ಬಾಲಕರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.
ಈ ಸಂಬಂಧ ಏಳು ಜನ ಸಂತ್ರಸ್ತ ಮಕ್ಕಳು ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಅಂತೆಯೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಚೈಲ್ಡ್‌ಲೈನ್ ಮತ್ತು ಪೊಲೀಸ್ ಅಧಿಕಾರಿಗಳು ಗೃಹಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ನೀಡಿದ ದೂರಿನ ಮೇಲೆ 36 ವರ್ಷದ ವಾರ್ಡನ್ ದುರೈಪಾಂಡ್ಯನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲದೇ, ಮನೆಯಲ್ಲಿ ಇಂತಹ ಕೃತ್ಯ ನಡೆಯುತ್ತಿರುವುದು ಗೊತ್ತಿದ್ದೂ ಪೊಲೀಸರು ಅಥವಾ ಮಕ್ಕಳ ಸಹಾಯವಾಣಿಗೆ ದೂರು ನೀಡಿದ ಆರೋಪದಡಿ ಮನೆಯ ಮಾಲೀಕರನ್ನೂ ಪೊಲೀಸರು ಬಂಧಿಸಿದ್ದಾರೆ. ಸದ್ಯ ಸಂತ್ರಸ್ತ ಮಕ್ಕಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ: ನಕಲಿ ಮದ್ಯ ಸೇವಿಸಿ 13 ಜನ ಸಾವು: ಘಟನೆ ಮರೆಯಾಚಲು ಹೋಗಿ ಕಣ್ಣು ಕಳೆದುಕೊಂಡ ಇಬ್ಬರು!