ವಯನಾಡ್ (ಕೇರಳ): ಜ್ಯೋತಿಷಿಯೊಬ್ಬ ಆದಿವಾಸಿ ಮಕ್ಕಳನ್ನು ದೇವರೆಂದು ಘೋಷಣೆ ಮಾಡಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದನಲ್ಲದೆ, ಮಕ್ಕಳ ಹಕ್ಕುಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆ ಆತನ ವಿರುದ್ಧ ದೂರು ದಾಖಲಾಗಿದೆ.
ಮಕ್ಕಳನ್ನು ದೇವರಾಗಿ ಮಾಡುತ್ತೇನೆ ಎಂದು ಹೇಳಿ ವಯನಾಡ್‌ನ ಆದಿವಾಸಿಗಳಿಂದ ಈತ ಹಣ ವಸೂಲಿ ಮಾಡುತ್ತಿದ್ದನಂತೆ. ಘಟನೆ ಸಂಬಂಧ ಕೇರಳ ಪೊಲೀಸರು ಮತ್ತು ಮಕ್ಕಳ ಹಕ್ಕುಗಳ ಆಯೋಗ ತನಿಖೆ ಆರಂಭಿಸಿದೆ.
ಈ ಜ್ಯೋತಿಷಿ ಪ್ರತಿ ಮಗುವಿಗೆ ರೂ. 15,000 ರಿಂದ ರೂ. 25,000 ರೂ.ಗಳನ್ನು ಪಡೆದು ದೇವರೆಂದು ಘೋಷಣೆ ಮಾಡುತ್ತಿದ್ದ. ದುರಂತ ಎಂದರೆ ದೇವರೆಂದು ಘೋಷಣೆ ಮಾಡಿದ ಮೇಲೆ ಮಕ್ಕಳು ಎಲ್ಲೂ ಹೋಗುವಂತಿರಲಿಲ್ಲ. ಪರಿಣಾಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.
ಇದನ್ನೂ ಓದಿ: ಹರ್ಷನ ಅಂತಿಮಯಾತ್ರೆ ವೇಳೆ ಕಲ್ಲು ತೂರಾಟ.. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರಿಂದ ಟಿಯರ್ ಗ್ಯಾಸ್ ಪ್ರಯೋಗ
10ನೇ ತರಗತಿಯ ಬಾಲಕಿ ಶಾಲೆಗೆ ಗೈರುಹಾಜರಾಗಿರುವ ಬಗ್ಗೆ ವಿಚಾರಿಸಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಮೂಢನಂಬಿಕೆಯಿಂದಾಗಿ ತಿರುನೆಲ್ಲಿ ಪಂಚಾಯಿತಿಯೊಂದರಲ್ಲೇ ಸುಮಾರು 25 ಮಕ್ಕಳ ಶಿಕ್ಷಣ ಸ್ಥಗಿತಗೊಂಡಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಕಿರಾತಕ ಜ್ಯೋತಿಷಿಯು ಮಕ್ಕಳಲ್ಲಿ ವಿಶೇಷ ಶಕ್ತಿಯಿದೆ ಎಂದು ಬುಡಕಟ್ಟು ಜನಾಂಗದವರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತಿದ್ದನಂತೆ. ಪೊಲೀಸರು ಈ ಕುರಿತು ವಿಸ್ತೃತ ತನಿಖೆ ಆರಂಭಿಸಿದ್ದು, ಈ ಭಾಗದಿಂದ ಶಾಲೆ ಬಿಟ್ಟ ಮಕ್ಕಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.