ಜೈಪುರ (ರಾಜಸ್ಥಾನ): ನಕಲಿ ಆಧಾರ್ ಕಾರ್ಡ್ ತೋರಿಸಿ 13 ವರ್ಷದ ಅಪ್ರಾಪ್ತೆಯೋರ್ವಳು 27 ವರ್ಷದ ವ್ಯಕ್ತಿ ಜತೆ ಸಪ್ತಪದಿ ತುಳಿದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಮಹೇಶ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 13 ವರ್ಷದ ಅಪ್ರಾಪ್ತೆಗೆ 20 ವರ್ಷ ಎಂದು ನಕಲಿ ಆಧಾರ್ ಕಾರ್ಡ್ ನೀಡಿ ಮದುವೆ ಮಾಡಿಸಿದ್ದಾರೆ. ಇದಾದ ಬಳಿಕ ಬಾಲಕಿಯನ್ನ ಗಂಡನ ಮನೆಗೆ ಕಳುಹಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಯೊಂದು ಪ್ರಕರಣದ ತನಿಖೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ.
ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರ ನಕಲಿ ನೀಡಿ, ಈ ಮದುವೆ ಮಾಡಿಸಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವರ ಹಾಗೂ ಆತನ ಕುಟುಂಬಸ್ಥರು ಪರಾರಿಯಾಗಿದ್ದಾರೆ.
ಮಾಹಿತಿ ಗೊತ್ತಾಗಿದ್ದು ಹೇಗೆ!?
ಮಹೇಶ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿಗೆ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು 1098 ಸಂಖ್ಯೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಈ ವೇಳೆ ಸಂಬಂಧಿಕರು ಬಾಲಕಿಯ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರ ತೋರಿಸಿದ್ದಾರೆ. ಇದರಲ್ಲಿ ಬಾಲಕಿ ಹುಟ್ಟಿದ್ದು 2001 ಎಂದು ಬರೆಯಲಾಗಿದ್ದು, ಅದರ ಪ್ರಕಾರ ಆಕೆಗೆ 20 ವರ್ಷ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಕುದುರೆ ಏರಿ ವಿಧಾನಸಭೆಗೆ ಆಗಮಿಸಿದ ಕಾಂಗ್ರೆಸ್ ಶಾಸಕಿ..
ಇದಾದ ಬಳಿಕ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದಾಗ ಆಕೆ ಹುಟ್ಟಿದ್ದು 2007ರಲ್ಲಿ ಎಂಬುದು ತಿಳಿದು ಬಂದಿದೆ. ಜತೆಗೆ ಮದುವೆಯಾದ ಹುಡುಗನಿಗೆ 27 ವರ್ಷ ಎಂದು ಗೊತ್ತಾಗಿದೆ. ತಕ್ಷಣವೇ ಬಾಲಕಿ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವರ ಹಾಗೂ ಆತನ ಕುಟುಂಬದ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಶೋಧಕಾರ್ಯ ನಡೆಸುತ್ತಿದ್ದಾರೆ.