ಲಖನೌ: ಉತ್ತರ ಪ್ರದೇಶದಲ್ಲಿ ತೀವ್ರಗೊಂಡಿರುವ ರಾಜಕೀಯ ಮೇಲಾಟದ ನಡುವೆಯೇ ಇಂದು ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಭೀಮ್ ಆರ್ಮಿ ಅಧ್ಯಕ್ಷ, ಯುವ ದಲಿತ ಮುಖಂಡ ಚಂದ್ರಶೇಖರ್ ಅವರು ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ, ಎಸ್‌ಪಿಯೊಂದಿಗೆ ಸಣ್ಣ ಪಕ್ಷಗಳ ಮೈತ್ರಿಗೆ ಭೀಮ್ ಆರ್ಮಿಯನ್ನು ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ವಿಶೇಷವೆಂದರೆ, ಯೋಗಿ ಸಂಪುಟಕ್ಕೆ ರಾಜೀನಾಮೆ ನೀಡಿರುವ ಸ್ವಾಮಿ ಪ್ರಸಾದ್ ಮೌರ್ಯ ಜತೆಗೆ ಬಿಜೆಪಿಯ ಹತ್ತಾರು ಬಂಡಾಯ ಶಾಸಕರು ಕೂಡ ಅಖಿಲೇಶ್ ಅವರನ್ನು ಭೇಟಿ ಮಾಡಲು ಸಮಾಜವಾದಿ ಪಕ್ಷದ ಕಚೇರಿಗೆ ಆಗಮಿಸಿದ್ದಾರೆ.
ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂಪ್ರಕಾಶ್ ರಾಜ್‌ಭರ್ ಈ ಸಭೆಯ ಹಿಂದೆ ಇದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಯುಪಿ ಚುನಾವಣೆಗೆ ಕಾಂಗ್ರೆಸ್ ರೆಡಿ: ಉನ್ನಾವೋ ರೇಪ್ ಸಂತ್ರಸ್ತೆಯ ತಾಯಿ ಸೇರಿ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್
ಈಗಾಗಲೇ ಯೋಗಿ ಸರ್ಕಾರದ ಮೂವರು ಸಚಿವರು ಹಾಗೂ ಸುಮಾರು 12 ಬಿಜೆಪಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಕೂಡ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಲು ಬಂದಿದ್ದಾರೆ.
ಸಮಾಜವಾದಿ ಪಕ್ಷದ ಜೊತೆ ಭೀಮ್ ಆರ್ಮಿ ಮೈತ್ರಿ ಮಾಡಿಕೊಂಡರೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ದೊಡ್ಡ ಲಾಭ ಸಿಗಬಹುದು ಎನ್ನುತ್ತಾರೆ ರಾಜಕೀಯ ತಜ್ಞರು. ದಲಿತ ಸಮಾಜದಲ್ಲಿ ಭೀಮ್ ಆರ್ಮಿಯ ಹಿಡಿತ ಬಹಳ ವೇಗವಾಗಿ ಹೆಚ್ಚುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಸಮಾಜವಾದಿ ಪಕ್ಷಕ್ಕೆ ಲಾಭವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.