ಮುಂಬೈ (ಮಹಾರಾಷ್ಟ್ರ): ಶಿವಸೇನೆಯ ಹಿರಿಯ ನಾಯಕ ಲೀಲಾಧರ್ ಡಾಕೆ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದಿದ್ಧಾರೆ. ಇದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಶಿಂದೆ, ಲೀಲಾಧರ್ ಡಾಕೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ವಿಚಾರಿಸಿ ಅವರ ಆಶೀರ್ವಾದ ಪಡೆದರು. ಈ ವೇಳೆ ಒಬ್ಬ ಸಾಮಾನ್ಯ ಶಿವಸೈನಿಕ ಮುಖ್ಯಮಂತ್ರಿಯಾಗಿರುವುದಕ್ಕೆ ಹಿರಿಯ ನಾಯಕ ಡಾಕೆ ಸಂತೋಷ ಪಟ್ಟರು. ಇತ್ತ, ಶಿವಸೇನೆಗೆ ಡಾಕೆ ಅವರ ಕೊಡುಗೆ ಬಹಳ ಮೌಲ್ಯಯುತವಾಗಿದೆ ಎಂದು ಶಿಂದೆ ಹೇಳಿದರು ಎಂದು ಸಿಎಂ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಶಿವಸೇನಾ ನಾಯಕತ್ವದ ವಿರುದ್ಧ ಶಿಂದೆ ಬಂಡಾಯದ ಬಾವುಟ ಹಾರಿಸಿದ್ದರು. 55 ಸೇನಾ ಶಾಸಕರಲ್ಲಿ 40 ಮಂದಿ ಶಿಂದೆ ಅವರನ್ನು ಬೆಂಬಲಿಸಿದ ಪರಿಣಾಮ ಜೂನ್ 29ರಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನವಾಗಿತ್ತು. ಮರುದಿನ ಶಿಂದೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ.
ಶಿವಸೇನೆ ಸ್ಥಾಪನೆ ಸಂದರ್ಭದಲ್ಲಿ ಬಾಳಾಸಾಹೇಬ್ ಠಾಕ್ರೆ ಅವರೊಂದಿಗೆ ಇದ್ದ ಕೆಲವೇ ಜನರಲ್ಲಿ ಲೀಲಾಧರ್ ಡಾಕೆ ಕೂಡ ಇದ್ದರು. ಆನಂದ್ ದಿಘೆ ಅವರೊಂದಿಗೆ ನಿಕಟ ಸಂಬಂಧವನ್ನು ಡಾಕೆ ಹೊಂದಿದ್ದರು. ಅಲ್ಲದೇ, ಇತ್ತೀಚಿನ ಶಿವಸೇನೆಯ ಈ ಬೆಳವಣಿಗೆಯಲ್ಲಿ ಲೀಲಾಧರ್ ಡಾಕೆ ಕೊಡುಗೆ ಸಾಕಷ್ಟು ಇದೆ ಎಂದು ಹೇಳಲಾಗಿದೆ.
ಇನ್ನು, ಕಳೆದ ವಾರ ಸಿಎಂ ಶಿಂದೆ, ಶಿವಸೇನೆ ಸಂಸದ ಹಾಗೂ ಹಿರಿಯ ನಾಯಕ ಗಜಾನನ ಕೀರ್ತಿಕರ್ ಅವರನ್ನು ಭೇಟಿ ಮಾಡಿದ್ದರು. ಆಗಲೂ ಗಜಾನನ ಆರೋಗ್ಯ ವಿಚಾರಿಸಲು ಭೇಟಿಯಾಗಿದ್ದೆ ಎಂದು ಹೇಳಿದ್ದರು. ಈಗ ಡಾಕೆ ಅವರ ಭೇಟಿಗೂ ಆರೋಗ್ಯ ವಿಚಾರಣೆಯ ನೆಪವನ್ನು ಶಿಂದೆ ಹೇಳಿದ್ದಾರೆ. ಈ ಮೂಲಕ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಮುರಿಯುವ ಕ್ರಮವನ್ನು ಶಿಂದೆ ಆರಂಭಿಸಿದ್ದಾರೆ ಎಂಬ ಮಾತುಗಳು ಮಹಾರಾಷ್ಟ್ರ ರಾಜಕೀಯದಲ್ಲಿ ಜೋರಾಗಿ ಕೇಳಿ ಬರುತ್ತಿವೆ.
ಇದನ್ನೂ ಓದಿ: ದ್ರೌಪದಿ ಮುರ್ಮು ಮತ್ತು ಮಲಾಲಾ... ಎರಡು ಬುಡಕಟ್ಟು ಸಮುದಾಯಗಳ ಹೋರಾಟದ ಕಥೆ!