ರಾಯ್‌ಪುರ: ಎರಡು ದಿನಗಳ ಹಿಂದಷ್ಟೇ ಜೋಡಿ ಅದ್ಧೂರಿ ವಿವಾಹವಾಗಿದ್ದರು. ನಿನ್ನೆ ಆರತಕ್ಷತೆ ಕಾರ್ಯಕ್ರಮವೂ ಆಯೋಜಿಸಲಾಗಿತ್ತು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಕಾರ್ಯಕ್ರಮಕ್ಕೆ ತಯಾರಾಗಲು ಕೋಣೆಯೊಳಕ್ಕೆ ಹೋದ ನವದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಸಂಭ್ರಮದ ಮನೆಯಲ್ಲಿ ದಿಗ್ಭ್ರಾಂತಿ ಉಂಟು ಮಾಡಿದೆ. ಛತ್ತೀಸ್ಗಢದ ರಾಯ್ಪುರದಲ್ಲಿ ಈ ದುರಂತ ಘಟನೆ ನಡೆದಿದೆ.
ಫೆ.19 ರಂದು ವಿವಾಹವಾಗಿದ್ದ ಸಂತೋಷಿ ನಗರದ ನಿವಾಸಿ ಅಸ್ಲಾಂ (24) ಮತ್ತು ಅವರ ಪತ್ನಿ ರಜತಲಾಬ್ ನಿವಾಸಿಯಾದ ಕಾಹ್ಕಶಾನ್ (22) ಮೃತರು. ಮದುವೆಯ ಬಳಿಕ ನಿನ್ನೆ ಆರತಕ್ಷತೆ ಕಾರ್ಯಕ್ರಮಕ್ಕೆ ಸಿದ್ಧರಾಗಲು ಒಂದೇ ಕೊಠಡಿಗೆ ಹೋದ ಇಬ್ಬರೂ ಎಷ್ಟೇ ಹೊತ್ತಾದರೂ ಹೊರಬಂದಿರಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಮುರಿದು ಒಳಹೊಕ್ಕಾಗ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡುಬಂದಿದೆ.
ಘಟನೆ ಕಂಡು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಇಬ್ಬರ ಸಾವಿಗೆ ನಿಖರ ಕಾರಣ ತಿಳಿದಿಲ್ಲವಾದರೂ, ಚಾಕುವಿನಿಂದ ಇರಿದ ಗಾಯಗಳು ದೇಹದ ಮೇಲಿವೆ. ತೀವ್ರ ರಕ್ತಸ್ರಾವವಾಗಿ ಇಬ್ಬರೂ ಕೋಣೆಯಲ್ಲೇ ಮೃತಪಟ್ಟಿದ್ದಾರೆ.
ಯಾವುದೋ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಒಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ಅವರೂ ಪ್ರಾಣ ಕಳೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳದಲ್ಲಿ ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ಒಬ್ಬರ ಬೆರಳಚ್ಚು ಪಡೆದು, ಚಾಕುವಿನ ಮೇಲಿನ ಗುರುತನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡಗಳನ್ನು ಕರೆಸಲಾಗಿದೆ. ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸ್ ಅಧಿಕಾರಿ ರಾಜೇಶ್ ಚೌಧರಿ ಮಾತನಾಡಿ, ಮನೆಯ ಒಂದೇ ಕೋಣೆಯಲ್ಲಿ ನವ ದಂಪತಿ ಶವಗಳು ಪತ್ತೆಯಾಗಿವೆ. ಇಬ್ಬರ ದೇಹದಲ್ಲೂ ಚಾಕುವಿನ ಗಾಯದ ಗುರುತುಗಳಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಇದರ ಹಿಂದಿನ ಕಾರಣ, ವ್ಯಕ್ತಿಗಳಿದ್ದಾರಾ ಎಂಬ ಕೋನದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಶವಪರೀಕ್ಷೆ ಬಳಿಕದ ವರದಿ ಘಟನೆಯ ಬಗ್ಗೆ ಸ್ಪಷ್ಟಪಡಿಸಲಿದೆ. ಯಾರು ಮೊದಲು ಚಾಕುವನ್ನು ಬಳಸಿದರು ಎಂಬುದು ಗೊತ್ತಾಗಲಿದೆ. ಇಬ್ಬರ ದೇಹದ ಮೇಲೂ ಒಂದೇ ರೀತಿಯ ಗಾಯಗಳಾಗಿವೆ. ಕೊಠಡಿಯಿಂದ ಒಂದು ಚಾಕುವನ್ನೂ ವಶಪಡಿಸಿಕೊಳ್ಳಲಾಗಿದೆ. ಮೃತರಿಬ್ಬರ ಬೆರಳಚ್ಚು ಕಲೆಹಾಕಿ, ಚಾಕುವಿನ ಮೇಲೆ ಅದು ಹೊಂದಿಕೆಯಾಗಲಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಪೊಲೀಸರು ತಿಳಿಸಿದರು.
ವಧು-ವರ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಎರಡೂ ಕುಟುಂಬಗಳು ಅವರ ಸಂಬಂಧವನ್ನು ಒಪ್ಪಿಕೊಂಡು ವಿವಾಹ ನೆರವೇರಿಸಿದ್ದರು. ಮದುವೆಯ ಆರತಕ್ಷತೆಗೆ ಭರದ ಸಿದ್ಧತೆ ನಡೆದಿದ್ದಾಗಲೇ, ದುರಂತ ನಡೆದಿರುವುದು ಕುಟುಂಬಸ್ಥರಿಗೆ ಆಘಾತ ನೀಡಿದೆ.
ಓದಿ: ಇನ್ಮುಂದೆ ಸಾರ್ವಜನಿಕರ ಕರೆ ಸ್ವೀಕರಿಸದಿದ್ದರೆ ಸಿಬ್ಬಂದಿಗೆ ಸಂಕಷ್ಟ: ಆಗ್ನೇಯ ವಿಭಾಗದಲ್ಲಿ ನೂತನ ವ್ಯವಸ್ಥೆ