ರಾಯ್‌ಪುರ(ಛತ್ತೀಸ್ಗಢ): ಕ್ಯಾನ್ಸರ್‌ಗೆ ತುತ್ತಾಗಿರುವ 13 ತಿಂಗಳ ಮಗುವಿಗೆ ತಾಯಿ ಕಾಲಿನಿಂದ ಪಂಪ್ ಮಾಡುವ ಯಂತ್ರದ ಮೂಲಕ ಆಮ್ಲಜನಕ ಒದಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಉಂಟು ಮಾಡಿದೆ. ಇದು ಅಲ್ಲಿನ ಮುಖ್ಯಮಂತ್ರಿ ಗಮನಕ್ಕೆ ಬಂದಿದ್ದು, ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಯ್‌ಪುರದ ಏಮ್ಸ್ ಮುಂಭಾಗ ಮರಕ್ಕೆ ಕಟ್ಟಿದ ತೊಟ್ಟಿಲಿನಲ್ಲಿ ಮಲಗಿರುವ ಮಗುವಿಗೆ ತಾಯಿ ಪಂಪ್ ಮಾಡುವ ಯಂತ್ರದಿಂದ ಆಮ್ಲಜನಕ ಸರಬರಾಜು ಮಾಡುತ್ತಿದ್ದಾರೆ. ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಟ್ಯಾಗ್ ಮಾಡಿದ್ದ ವಿಡಿಯೋ ಅಧಿಕಾರಿಗಳ ಗಮನ ಸೆಳೆದಿದೆ. ಈ ಬಗ್ಗೆ ತಿಳಿದ ಸಿಎಂ ರಾಯಪುರ ಜಿಲ್ಲಾಧಿಕಾರಿಗೆ ಸೂಚನೆ ನೀಡಿ, ಸಂತ್ರಸ್ತ ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ತಕ್ಷಣವೇ ಆದೇಶ ನೀಡಿದ್ದಾರೆ.
5 ತಿಂಗಳಿಂದ ಆಸ್ಪತ್ರೆ ಹೊರಗೆ ಚಿಕಿತ್ಸೆ: 13 ತಿಂಗಳ ಮಗುವಿಗೆ ಮೆದುಳಿನಲ್ಲಿ ಗೆಡ್ಡೆಯಾಗಿ ಅದು ಕ್ಯಾನ್ಸರ್‌ಗೆ ತಿರುಗಿದೆ. ಇದರಿಂದ ಉಸಿರಾಟದ ತೊಂದರೆ ಉಂಟಾಯಿತು. ಆಸ್ಪತ್ರೆಯಲ್ಲಿ ಸರ್ಕಾರದ ಕೋಟಾದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ನಮ್ಮಲ್ಲಿ ಔಷಧಗಳನ್ನು ಖರೀದಿಸಲು ಹಣವಿಲ್ಲ ಎಂದು ಮಗುವಿನ ತಂದೆ ಹೇಳಿದರು.