ರಾಯ್ಪುರ್(ಛತ್ತೀಸ್ಗಢ): ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ನೇತೃತ್ವದ ಛತ್ತೀಸ್ಗಢ ಸರ್ಕಾರ ಗೋಮೂತ್ರ ಖರೀದಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಜುಲೈ 28ರಿಂದ ಈ ಯೋಜನೆ ಆರಂಭಗೊಳ್ಳಲಿದ್ದು, ಪ್ರತಿ ಲೀಟರ್ಗೆ 4 ರೂಪಾಯಿ ನೀಡಲು ನಿರ್ಧರಿಸಿದೆ. ಛತ್ತೀಸ್ಗಢದಲ್ಲಿ ಆರಂಭಗೊಳ್ಳಲಿರುವ 'ಹರೇಲಿ ಉತ್ಸವ'ದ ನಿಮಿತ್ತ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಆರಂಭದಲ್ಲಿ ಪ್ರತಿ ಜಿಲ್ಲೆಯ ಎರಡು ಆಯ್ದ ಸ್ವಯಂ ಪೋಷಕ ಗೋದಾನ್ಗಳಲ್ಲಿ ಗೋಮೂತ್ರ ಖರೀದಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕೋಸ್ಕರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಗೋದಾನ್ ನ್ಯಾಯ ಮಿಷನ್ ವ್ಯವಸ್ಥಾಪಕ ನಿರ್ದೇಶಕ ಡಾ. ಅಯ್ಯಾಜ್ ತಾಂಬೋಳಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಖರೀದಿ ಮಾಡುವ ಗೋಮೂತ್ರದಿಂದ ಬೆಳೆಗಳ ಕೀಟ ನಿಯಂತ್ರಣ ಹಾಗೂ ನೈಸರ್ಗಿಕ ದ್ರವ ಗೊಬ್ಬರ ತಯಾರಿಸಲು ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಗೋಮೂತ್ರ ಖರೀದಿಯಿಂದ ರಾಜ್ಯದಲ್ಲಿ ಹಸು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಮಹಿಳಾ ಸ್ವ-ಸಹಾಯ ಗುಂಪು ಸ್ವಾವಲಂಬನೆ ಮಾಡುವುದು ಮುಖ್ಯ ಉದ್ದೇಶವಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಗೋಮುತ್ರ ಖರೀದಿ ಮಾಡುವುದರ ಬಗ್ಗೆ ಸಿಎಂ ಭೂಪೇಶ್ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಜುಲೈ 28ರಿಂದ ಈ ಯೋಜನೆ ಆರಂಭಗೊಳ್ಳಲಿದೆ. ರಾಜ್ಯದಲ್ಲಿ 2020ರ ಜುಲೈ ತಿಂಗಳಿಂದ ಸೆಗಣಿ ಖರೀದಿ ಮಾಡಲಾಗ್ತಿದ್ದು, ಪ್ರತಿ ಕೆಜಿಗೆ 2 ರೂಪಾಯಿ ನಿಗದಿ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 150ಕೋಟಿಗೂ ಅಧಿಕ ಮೊತ್ತದ ಸೆಗಣಿ ಖರೀದಿ ಮಾಡಲಾಗಿದೆ. ಅದರಿಂದ ಎರೆಹುಳು ಗೊಬ್ಬರ, ಸೂಪರ್ ಕಾಂಪೋಸ್ಟ್, ಸೂಪರ್ ಪ್ಲಸ್ ಗೊಬ್ಬರ ತಯಾರಿಸಲಾಗಿದೆ.
ಇದನ್ನೂ ಓದಿರಿ: 'ಗೋಮೂತ್ರ ಕುಡಿದು ಸಿದ್ಧರಾಗಿರಿ' ಎಂದಿದ್ದ TMC ಸಂಸದೆ ಲೋಕಸಭೆಯಲ್ಲಿ ಮಾತನಾಡಿದ್ದೇನು!?