ರಾಯಪುರ (ಛತ್ತೀಸ್‌ಗಢ): "ದೇಶದಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆಯಂತಹ ಪ್ರಕರಣಗಳಿಗೆ ಮದ್ಯಪಾನವೇ ಕಾರಣ. ಇದರ ನಿಯಂತ್ರಣಕ್ಕಾಗಿ ಮದ್ಯಪಾನದ ಬದಲಾಗಿ ಗಾಂಜಾವನ್ನು ನೀಡಿ". ಇದು ಛತ್ತೀಸ್ಗಢದ ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ಅವರ ಹೊಸ ಸಂಶೋಧನೆ. ದೇಶದಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು "ಮಹತ್ವದ ಸಲಹೆ"ಯನ್ನು ನೀಡಿ ವಿವಾದಕ್ಕೀಡಾಗಿದ್ದಾರೆ.
ಮದ್ಯಪಾನದಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಆದರೆ ಸೆಣಬಿನ ಮಾದಕ ವಸ್ತು ಮತ್ತು ಗಾಂಜಾ ಸೇವನೆ ಅಪರಾಧಗಳನ್ನು ಹೆಚ್ಚಿಸುವುದಿಲ್ಲ ಎಂಬ ಬಿಜೆಪಿ ಶಾಸಕನ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ಸಾರ್ವಜನಿಕ ಪ್ರತಿನಿಧಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ, ಚಟಕ್ಕೆ ಉತ್ತೇಜನ ನೀಡುತ್ತಿದ್ದಾನೆ ಎಂದು ಕಿಡಿಕಾರಿದೆ.
ಮದ್ಯಪಾನದ ಬದಲಾಗಿ ಗಾಂಜಾ ನೀಡಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಈ ಹಿಂದೆ ವಿಧಾನಸಭೆಯಲ್ಲಿ ಈ ಬಗ್ಗೆ ಒಮ್ಮೆ ಚರ್ಚಿಸಿದ್ದೆ. ಅತ್ಯಾಚಾರ, ಕೊಲೆ, ಜಗಳಕ್ಕೆ ಎಲ್ಲೋ ಮದ್ಯಪಾನವೇ ಕಾರಣ ಎಂದು ನನಗೆ ಅನ್ನಿಸಿದೆ. ಗಾಂಜಾ ಸೇವಿಸುವವರು ಅತ್ಯಾಚಾರ, ಕೊಲೆ ಮತ್ತು ಡಕಾಯಿತಿ ನಡೆಸಿದ್ದಾರೆಯೇ? ಎಂದು ಸದನವನ್ನು ಪ್ರಶ್ನಿಸಿದ್ದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಗಾಂಜಾ ಬಳಕೆಯ ಕಡೆಗೆ ನಾವು ಹೇಗೆ ಸಾಗಬೇಕು ಎಂಬುದನ್ನು ಮದ್ಯಪಾನ ನಿಯಂತ್ರಣ ಸಮಿತಿ ಯೋಚಿಸಬೇಕು. ಜನರು ವ್ಯಸನವನ್ನು ಬಯಸಿದಲ್ಲಿ, ಅದು ಅತ್ಯಾಚಾರ, ಕೊಲೆಗೆ ಕಾರಣವಾಗದ ವಸ್ತುವನ್ನು(ಗಾಂಜಾ) ನೀಡಬೇಕು. ಇದು ನನ್ನ ವೈಯಕ್ತಿಯ ಅಭಿಪ್ರಾಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಗಾಂಜಾ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಆದರೆ ಗಾಂಜಾ ಸಸ್ಯದ ಎಲೆಗಳನ್ನು ಬಳಸಿ ತಯಾರಿಸಿದ ಮಿಶ್ರಣವಾದ "ಭಾಂಗ್" ಅನ್ನು ಕಾನೂನಿನಡಿಯಲ್ಲಿ ಅನುಮತಿಸಲಾಗಿದೆ.
ಬಿಜೆಪಿ ಶಾಸಕರ ಈ ಹೇಳಿಕೆಯನ್ನು ಟೀಕಿಸಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಯಾವುದೇ ರೂಪದ ವ್ಯಸನಕಾರಿ ಸಲಹೆಯನ್ನು ನೀಡುವುದು ಸರಿಯಲ್ಲ. ಗಾಂಜಾವನ್ನು ಸಕ್ರಮಗೊಳಿಸಬೇಕಾದರೆ, ಶಾಸಕರು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಿ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಪ್ರತಿಪಕ್ಷಗಳಿಗೆ ರಾಷ್ಟ್ರಕ್ಕಿಂತ, ರಾಜಕೀಯ ಹಿತಾಸಕ್ತಿಯೇ ಹೆಚ್ಚು: ಪ್ರಧಾನಿ ಮೋದಿ