ಹೈದರಾಬಾದ್: ಮಳೆ ಹಾಗೂ ಬಿಸಿಲಿನಲ್ಲಿ ಕೊಡೆ ಹಿಡಿದು ಓಡಾಡುವವರನ್ನು ನಾವು ನೋಡುತ್ತೇವೆ. ಆದರೆ ಸರ್ಕಾರದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕರು ಕೊಡೆ ಹಿಡಿದುಕೊಂಡು ಹೋಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ವಿಸಾಖಾದಿಂದ ಸಾಲೂರಿಗೆ ತೆರಳುತ್ತಿದ್ದ ಅಲ್ಟ್ರಾ ಡಿಲಕ್ಸ್ ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರು ಇಂತಹದೊಂದು ಅನುಭವಕ್ಕೆ ಸಾಕ್ಷಿಯಾದರು.
ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದರಿಂದ ಬಸ್‌ನ ಛಾವಣಿಯಿಂದ ನೀರು ಒಳಗೆ ಬರಲಾರಂಭಿಸಿತು. ಆಗ ಬಸ್‌ನಲ್ಲಿ ಛತ್ರಿ ಹೊಂದಿದ್ದ ಕೆಲವರು ಬಸ್ಸಿನಲ್ಲೂ ಛತ್ರಿ ಹಿಡಿದು ಪ್ರಯಾಣಿಸಿದರು. ಆದರೆ ಛತ್ರಿ ತರದವರು ಮಾತ್ರ ಸಾರಿಗೆ ಸಂಸ್ಥೆಯನ್ನು ಶಪಿಸುತ್ತ ಪ್ರಯಾಣ ಮುಂದುವರೆಸಿದರು.
ಆರ್‌ಟಿಸಿ ಬಸ್‌ನಲ್ಲಿ 'ಛತ್ರಿ' ಪ್ರಯಾಣದ ಕುರಿತು ಆರ್‌ಟಿಸಿ ಎಂಡಿ ದ್ವಾರಕಾತಿರುಮಲ ರಾವ್ ಪ್ರತಿಕ್ರಿಯಿಸಿದ್ದಾರೆ. ಸಾಲೂರು ಡಿಪೋಗೆ ಸೇರಿದ ಅಲ್ಟ್ರಾ ಡಿಲಕ್ಸ್ ಬಸ್ ನಲ್ಲಿ ಮೇಲ್ಛಾವಣಿ ಸೋರಿಕೆಯಾಗಿದ್ದು, ಬಸ್ ನ್ನು ಕೂಡಲೇ ನಿಲ್ಲಿಸಿ ದುರಸ್ತಿ ಕಾರ್ಯ ನಡೆಸಲಾಗಿದೆ. ಇದಕ್ಕೆ ಕಾರಣರಾದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದರು.
ಎಲ್ಲ ಬಸ್‌ಗಳನ್ನು ತಪಾಸಣೆ ಮಾಡಲಾಗಿದ್ದು, ಸೋರಿಕೆ ಇರುವ ಬಸ್‌ಗಳನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಲಾಗಿದೆ. ದುರಸ್ತಿ ಮಾಡಿದ ನಂತರವೇ ಸೇವೆಗಳನ್ನು ಪುನರಾರಂಭಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ ಎಂದರು.
ಮತ್ತೊಂದು ಘಟನೆ: ವೇಗವಾಗಿ ಚಲಿಸುತ್ತಿದ್ದ ಆರ್‌ಟಿಸಿ ಬಸ್‌ನ ಹಿಂಬದಿಯ ಚಕ್ರಗಳು ಹಠಾತ್ತನೆ ಸಿಡಿದ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಅಕಿವೀಡು ಮಂಡಲದ ಅಜ್ಜಮೂರು ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿತ್ತು. ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದು, 40 ಪ್ರಯಾಣಿಕರು ಸುರಕ್ಷಿತವಾಗಿ ಬಸ್ನಿಂದ ಕೆಳಗಿಳಿದಿದ್ದರು.
ಸ್ಥಳೀಯರು ಮತ್ತು ಪ್ರಯಾಣಿಕರು ಹೇಳುವ ಪ್ರಕಾರ, ನರಸಾಪುರಂ ಡಿಪೋಗೆ ಸೇರಿದ ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಲೂರು ಕಡೆಗೆ ಹೋಗುತ್ತಿದ್ದಾಗ ಅಜ್ಜಮೂರು ಎಂಬಲ್ಲಿ ಎರಡು ಚಕ್ರಗಳು ಸಿಡಿದಿವೆ. ಒಂದು ಟೈರ್ ಸಂಪೂರ್ಣವಾಗಿ ಕಿತ್ತು ಹೊರಬಂದಿದೆ. ಇದನ್ನು ಗಮನಿಸಿದ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾನೆ. ಏಕಾಏಕಿ ಭಾರಿ ಶಬ್ದದೊಂದಿಗೆ ಬಸ್ ಪಲ್ಟಿಯಾಗಿದ್ದು, ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಆದರೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ನಂತರ ಬೇರೆ ಬಸ್‌ಗಳಲ್ಲಿ ಅವರವರ ಸ್ಥಳಗಳಿಗೆ ಕಳುಹಿಸಲಾಯಿತು.
ಇದನ್ನೂ ಓದಿ: ಕೇರಳದಲ್ಲಿ ಪಿಎಫ್ಐ ಹಿಂಸಾಚಾರ.. ನಷ್ಟ ಭರ್ತಿಗಾಗಿ 5 ಕೋಟಿ ವಸೂಲಿಗೆ ಹೈಕೋರ್ಟ್ ಆದೇಶ