ಪಾಟ್ನಾ: ಕೊರೊನಾ ಕರಿನೆರಳಿನಲ್ಲೂ ಬಿಹಾರ ಸೇರಿದಂತೆ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಚಾತ್ ಪೂಜೆ ಇಂದಿನಿಂದ ಆರಂಭವಾಗಿದೆ. ‘ಬಿಹಾರದಲ್ಲಿ ಎಲ್ಲಾ ನದಿ ಮತ್ತು ಕೊಳಗಳ ಸ್ನಾನದ ಘಟ್ಟಗಳನ್ನು ಸ್ವಚ್ಛಗೊಳಿಸಲಾಗಿದ್ದು ಮತ್ತು ಭದ್ರತಾ ವ್ಯವಸ್ಥೆಗಳನ್ನು ಸಹ ಕೈಗೊಳ್ಳಲಾಗಿದೆ.
ಭಕ್ತರು ಉಪವಾಸ ವ್ರತ ಕೈಗೊಳ್ಳಲಿದ್ದಾರೆ. ನವೆಂಬರ್ 19 ರಂದು ಖಾರ್ನಾ ಪೂಜೆ, ನವೆಂಬರ್ 20 ರಂದು ಸೂರ್ಯಾಸ್ತಮಾನಕ್ಕೂ ಮೊದಲು ಪ್ರಾರ್ಥನೆ ಇರಲಿದ್ದು, 21ರಂದು ಸೂರ್ಯೋದಯದ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಮುಕ್ತಾಯಗೊಳ್ಳಲಿದೆ.
ಈ ಉತ್ಸವದಲ್ಲಿ ಜನರು ಸ್ವಚ್ಛತೆಗೆ ಆದ್ಯತೆ ಕೊಡುವುದೇ ಆಗಿದ್ದು, ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ ಪೂಜೆ ಸಲ್ಲಿಸಲಿದ್ದು, ಇದಕ್ಕಾಗಿ ಎಲ್ಲಾ ನದಿ ಮತ್ತು ಕೊಳಗಳನ್ನು ಸ್ವಚ್ಛಗೊಳಿಸಲಾಗಿದೆ. ನದಿ-ಕೊಳಗಳ ಬಳಿ ನಡೆಯುವ ಪೂಜಾ ಆಚರಣೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಬ್ಯಾರಿಕೇಡ್ ನಿರ್ಮಿಸಲಾಗಿದೆ.
ಪೊಲೀಸ್ ಬಿಗಿ ಭದ್ರತೆ:
ಉತ್ಸವದಲ್ಲಿ ಕಳ್ಳತನ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಭದ್ರತೆ ಒದಗಿಸುವ ಉದ್ದೇಶದಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಎಚ್ಚರಿಕೆ ವಹಿಸಲಾಗಿದೆ. ಈ ಸಂದರ್ಭ ಪೊಲೀಸರು ಎಲ್ಲರ ಮೇಲೆ ನಿಗಾ ಇಡಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಪಿರ್ಬಾಹೋರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾರ, ಉತ್ಸವ ಸಂದರ್ಭ ಸಮಾಜ ವಿರೋಧಿ ಅಂಶ ಮತ್ತು ಕಳ್ಳರ ಬಗ್ಗೆ ಪೊಲೀಸರು ನಿಗಾ ಇಡುತ್ತಿದ್ದಾರೆ. ಭಕ್ತರು ನದಿಯ ಆಳಕ್ಕೆ ಪ್ರವೇಶಿಸದಂತೆ ಪೊಲೀಸರು ಎಚ್ಚರ ವಹಿಸುತ್ತಾರೆಂದು ತಿಳಿಸಿದ್ದಾರೆ.
ಕೋವಿಡ್ ಭೀತಿ:
ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ವರ್ಷ ಮಹಾದಮ್ ಸೂರ್ಯ ದೇವಾಲಯದಲ್ಲಿ ಪ್ರಸಿದ್ಧ ಚಾತ್ ಪೂಜೆ ನಡೆಯುವುದಿಲ್ಲ. ಹಾಗೆ ಬಿಹಾರದ ಎಲ್ಲಾ ಸೂರ್ಯ ದೇವಾಲಯಗಳಲ್ಲಿ ಈ ವರ್ಷ ಯಾವುದೇ ಉತ್ಸವ ನಡೆಯುವುದಿಲ್ಲ ಎನ್ನಲಾಗ್ತಿದೆ.