ಪುಣೆ(ಮಹಾರಾಷ್ಟ್ರ): ನಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ)ಯ ಹಿರಿಯ ನಾಯಕ ಛಗನ್ ಭುಜಬಲ್ ಅವರ ಕಚೇರಿಗೆ ಜೀವ ಬೆದರಿಕೆ ಕರೆ ಬಂದಿದೆ. ಪ್ರಕರಣ ಸಂಬಂಧ ಪುಣೆ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲ್ಹಾಪುರ ನಿವಾಸಿ ಪ್ರಶಾಂತ್ ಪಾಟೀಲ್ ಬಂಧಿತ ಆರೋಪಿ.
ಮಾಹಿತಿ ಪ್ರಕಾರ, ಸಚಿವ ಛಗನ್ ಭುಜಬಲ್ ಸೋಮವಾರ (ಜುಲೈ 10) ರಂದು ಪುಣೆಯಲ್ಲಿದ್ದರು. ವಿವಿಐಪಿ ಸರ್ಕ್ಯೂಟ್ ಹೌಸ್ನಲ್ಲಿ ಅವರ ವಾಸ್ತವ್ಯವಿತ್ತು. ರಾತ್ರಿ 11:15 ರ ಸುಮಾರಿಗೆ ಪ್ರಶಾಂತ್ ಪಾಟೀಲ್ ಎಂಬ ಯುವಕ ಸಚಿವರ ಆಪ್ತ ಸಹಾಯಕನ ಮೊಬೈಲ್ ಫೋನ್‌ಗೆ ಕರೆ ಮಾಡಿದ್ದಾನೆ. ನಾನು ನಾಳೆ ನಿನ್ನನ್ನು ಕೊಲ್ಲುತ್ತೇನೆ ಎಂದು ನೇರವಾಗಿ ಛಗನ್ ಭುಜಬಲ್‌ಗೆ ಬೆದರಿಕೆ ಹಾಕಿದ್ದ. ಬಳಿಕ ಕೊಲೆ ಬೆದರಿಕೆ ಬಂದಿರುವ ದೂರವಾಣಿ ಸಂಖ್ಯೆಯನ್ನು ಪುಣೆ ಪೊಲೀಸರಿಗೆ ನೀಡಲಾಗಿತ್ತು.
ನಂಬರ್ ಟ್ರೇಸ್ ಮಾಡಲಾಗಿದ್ದು, ಆರೋಪಿ ಮಹಾಡ್ನಲ್ಲಿ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಆರೋಪಿ ಯುವಕ ಕೊಲ್ಹಾಪುರ ಜಿಲ್ಲೆಯ ಚಂದಗಢ ಮೂಲದವನು. ಅವನು ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಗೂಗಲ್ ನಲ್ಲಿ ಸರ್ಚ್ ಮಾಡಿ ಭುಜಬಲ್ ಅವರ ಪಿಎ ಮೊಬೈಲ್ ನಂಬರ್ ಪಡೆದು ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಎನ್‌ಸಿಪಿ ಪಕ್ಷದಲ್ಲಿ ಬಂಡಾಯ ಆರಂಭವಾದಾಗಿನಿಂದಲೂ ಛಗನ್ ಭುಜಬಲ್ ಶರದ್ ಪವಾರ್ ಅವರನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಅದೇ ಸಮಯದಲ್ಲಿ, ಶರದ್ ಪವಾರ್ ಕೂಡ ಛಗನ್ ಭುಜಬಲ್ ಅವರ ಯೆವ್ಲಾ ಕ್ಷೇತ್ರದಲ್ಲಿ ಭಾಗವಹಿಸುವ ಮೂಲಕ ಶಕ್ತಿ ಪ್ರದರ್ಶಿಸಿದ್ದರು. ಆದ್ದರಿಂದ, ಈ ಸಂಘರ್ಷವು ದೊಡ್ಡದಾಗುತ್ತದೆ ಎಂಬ ರಾಜಕೀಯ ಚಿತ್ರಣ ಎಲ್ಲೆಡೆ ಇದ್ದಾಗ, ಛಗನ್ ಭುಜಬಲ್‌ಗೆ ಬೆದರಿಕೆಯನ್ನು ವಿಭಿನ್ನವಾಗಿ ಅರ್ಥೈಸಲಾಗುತ್ತಿದೆ.
ಇದನ್ನೂ ಓದಿ: ಶರದ್ ಪವಾರ್‌ಗೆ ಬೆದರಿಕೆ ಸಂದೇಶ: ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಸುಪ್ರಿಯಾ ಸುಳೆ
ಸಚಿವ ಧನಂಜಯ್ ಮುಂಡೆ ಅವರಿಗೂ ಬೆದರಿಕೆ ಕರೆ: ಛಗನ್ ಭುಜಬಲ್ ಬಳಿಕ ಸಚಿವ ಧನಂಜಯ್ ಮುಂಡೆ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ. ಶಿಂಧೆ ಮತ್ತು ಪವಾರ್ ಸರ್ಕಾರದಲ್ಲಿ ಹೊಸದಾಗಿ ಚುನಾಯಿತ ಸಚಿವ ಧನಂಜಯ್ ಮುಂಡೆ ಅವರಿಗೆ ರಾತ್ರಿ 12 ಗಂಟೆಗೆ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನನಗೆ 50 ಲಕ್ಷ ರೂ.ಕೊಡಿ. ಇಲ್ಲದಿದ್ದರೆ ಧನಂಜಯ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶರದ್ ಪವಾರ್‌ಗೆ ಜೀವ ಬೆದರಿಕೆ: ಇತ್ತೀಚೆಗೆ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಜೀವ ಬೆದರಿಕೆ ಹಾಕಲಾಗಿತ್ತು. ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರಾಂಚ್ ಪುಣೆಯ ವ್ಯಕ್ತಿಯನ್ನು ಬಂಧಿಸಿತ್ತು.
ಇದನ್ನೂ ಓದಿ: NCP ನಾಯಕ ಶರದ್ ಪವಾರ್‌ಗೆ ಜೀವ ಬೆದರಿಕೆ: ಐಟಿ ಉದ್ಯೋಗಿಯ ಬಂಧನ