ಚೆನ್ನೈ(ತಮಿಳುನಾಡು ):ತಮಿಳುನಾಡು ಸಹಕಾರಿ ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ 2.61 ಕೋಟಿ ಗೂ ಹೆಚ್ಚು ಹಣವನ್ನು ದೋಚಿದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಗುರುವಾರ ದೆಹಲಿಯಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ. ಸೈಬರ್ ದರೋಡೆಕೋರರು ನವೆಂಬರ್ 18 ರಂದು ಮನ್ನಾಡಿಯಲ್ಲಿರುವ ಬ್ಯಾಂಕ್ ಪ್ರಧಾನ ಕಚೇರಿಯ ಸರ್ವರ್‌ಗಳನ್ನು ಹ್ಯಾಕ್ ಮಾಡಿದ್ದರು. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದರು.
ಹ್ಯಾಕರ್‌ಗಳನ್ನು ನೈಜೀರಿಯಾದ ಆಗ್ನೆಸ್ ಗಾಡ್ವಿನ್ ಮತ್ತು ಆಗಸ್ಟಿನ್ ಎಂದು ಗುರುತಿಸಲಾಗಿದೆ. ದೆಹಲಿಯ ಉತ್ತಮ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಇಬ್ಬರು ಸೈಬರ್ ದರೋಡೆಕೋರರನ್ನು ಪೊಲೀಸರ ವಿಶೇಷ ತಂಡ ಜ.12 ರಂದು ಚೆನ್ನೈಗೆ ಕರೆತಂದಿದೆ. ದೂರು ಸ್ವೀಕರಿಸಿದ ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಸೈಬರ್ ಕ್ರೈಂ ಪೊಲೀಸರು ದರೋಡೆಕೋರರು ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಬ್ಯಾಂಕ್ಗೆ ಫಿಶಿಂಗ್ ಮೇಲ್ ಕಳುಹಿಸಲಾಗಿತ್ತು, ಅ ಮೂಲಕ ಅಧಿಕಾರಿಗಳಿಗೆ ತಿಳಿಯದಂತೆ ಕೀ ಲಾಗರ್ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಸ್ವೀಟ್ 32 ಅಟ್ಯಾಕ್: ಹ್ಯಾಕರ್‌ಗಳು ಬ್ಯಾಂಕಿನ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸುತ್ತಿದ್ದರು, ಈ ಮೂಲಕ ಡೇಟಾವನ್ನು ಸಂಗ್ರಹಿಸಿದ್ದರು. ಬ್ಯಾಂಕಿನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ ನಂತರ, ಅವರು 'ಸ್ವೀಟ್ 32' ಅಟ್ಯಾಕ್ ಎಂದು ಕರೆಯಲ್ಪಡುವ ಸೈಬರ್ ದಾಳಿಯನ್ನು ಬಳಸಿಕೊಂಡು ಹ್ಯಾಕ್ ಮಾಡಲು ಪ್ರಾರಂಭಿಸಿದ್ದಾರೆ. ಈ ಮೂಲಕ ಸೈಬರ್ ದರೋಡೆಕೋರರು ಎಲ್ಲ ಖಾತೆಗಳನ್ನು ಪ್ರವೇಶಿಸಿ, ಇಡೀ ನೆಟ್ವರ್ಕ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
1 ಕೋಟಿ ರೂಪಾಯಿಗಳನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತನೆ ಮಾಡಿರುವ ಆರೋಪಿಗಳು: ಸೈಬರ್ ದರೋಡೆಕೋರರು ಕಳೆದ ನವೆಂಬರ್‌ನಲ್ಲಿ ಹಣವನ್ನು ದೋಚಿ ನೈಜೀರಿಯಾದ ಎರಡು ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಿದ್ದರು ನಂತರ ಬಿನಾನ್ಸ್ ಎಂಬ ವೆಬ್‌ಸೈಟ್ ಮೂಲಕ 1 ಕೋಟಿ ರೂಪಾಯಿಗಳನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿದ್ದರು. ಸೈಬರ್ ದರೋಡೆಕೋರರು ಹ್ಯಾಕಿಂಗ್‌ಗೆ ಬಳಸಲಾದ ಸಿಸ್ಟಮ್‌ನ ಐಪಿ ವಿಳಾಸವನ್ನು ಟ್ರ್ಯಾಕ್ ಮಾಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ನೈಜೀರಿಯಾದ ಸೈಬರ್ ದರೋಡೆಕೋರರು ನಕಲಿ ದಾಖಲೆಗಳನ್ನು ಬಳಸಿಕೊಂಡು ಒಟ್ಟು 32 ನಕಲಿ ಬ್ಯಾಂಕ್ ಖಾತೆಗಳನ್ನು ರಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಹೆಚ್ಚುತ್ತಿದೆ ತಂತ್ರಜ್ಞಾನದ ದುರ್ಬಳಕೆ: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ತಂತ್ರಜ್ಞಾನದ ದುರ್ಬಳಕೆ ಪ್ರಮಾಣವೂ ಹೆಚ್ಚಾಗುತ್ತಿವೆ. ಬ್ಯಾಂಕಿಂಗ್, ಸೈಬರ್ ವಂಚನೆಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಅಗ್ರಸ್ಥಾನದಲ್ಲಿವೆ ಎಂದು ಕಳೆದ ವರ್ಷ ಸರ್ಕಾರದ ವರದಿಗಳು ತಿಳಿಸಿವೆ. 2021ರಲ್ಲಿ (ಏಪ್ರಿಲ್-ಡಿಸೆಂಬರ್) ನಡೆದ ಪ್ರಕರಣಗಳ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿತ್ತು.
ಈ ವೇಳೆ ದೇಶದಲ್ಲಿ ಸುಮಾರು 50,242 ಪ್ರಕರಣಗಳು ದಾಖಲಾಗಿದ್ದವು. ಕೇವಲ 9 ತಿಂಗಳಲ್ಲಿ ಗ್ರಾಹಕರು ಸುಮಾರು 167 ಕೋಟಿ ರೂಪಾಯಿ ಕಳೆದುಕೊಂಡಿದ್ದರು. 2021ರಲ್ಲಿ ಕರ್ನಾಟಕದಲ್ಲಿ 2,397 ವಂಚನೆ ಕೇಸ್ಗಳು ದಾಖಲಾಗಿದ್ದವು.
ಇದನ್ನೂ ಓದಿ:ಮುಂಬೈ ಪೊಲೀಸರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಸೈಬರ್ ಖದೀಮರು!