ನವಾಡ (ಬಿಹಾರ): ಬಿಹಾರದ ನವಾಡ ಜಿಲ್ಲೆಯಲ್ಲಿ ಜನಿಸಿರುವ ವಿಚಿತ್ರ ಮಗುವೊಂದಕ್ಕೆ ಕೊನೆಗೂ ಸಹಾಯಹಸ್ತ ಹರಿದು ಬಂದಿದ್ದು, ನಟ ಸೋನು ಸೂದ್ ಎಲ್ಲ ರೀತಿಯ ವೈದ್ಯಕೀಯ ವ್ಯವಸ್ಥೆಗೆ ಮುಂದಾಗಿದ್ದಾರೆ. ಹೀಗಾಗಿ, ಬಿಹಾರದ ಚೌಮುಖಿಗೆ ಮುಂಬೈನಲ್ಲಿ ಚಿಕಿತ್ಸೆ ಆರಂಭಗೊಂಡಿದೆ. ನಟ ಸೋನು ಸೂದ್ ನೆರವಿನಿಂದ ಈ ವಿಕಲಚೇತನ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬ ಸಮೇತ ಮುಂಬೈ ತಲುಪಿದ್ದು, ಸೋನು ಸೂದ್ ಸ್ವತಃ ಬಾಲಕಿ ಮತ್ತು ಆಕೆಯ ಕುಟುಂಬಸ್ಥರನ್ನ ಭೇಟಿ ಮಾಡಿ, ಮಾತುಕತೆ ಸಹ ನಡೆಸಿದರು.
ಏನಿದು ಪ್ರಕರಣ?: ಇಲ್ಲಿನ ಹೇಮಜಾ ಪಂಚಾಯಿತಿ ವ್ಯಾಪ್ತಿಯ ವರ್ಸಲಿಗಂಜ್ ಪ್ರದೇಶದ ಬಸಂತ್ ಕುಮಾರ್ ಮತ್ತು ಉಷಾ ದೇವಿ ಎಂಬುವವರ ದಂಪತಿಯ ಪುತ್ರಿ ಚೌಮುಖಿ ಕುಮಾರಿಗೆ ತಲಾ ನಾಲ್ಕು ಕೈ-ಕಾಲುಗಳ ಇವೆ. ಎರಡೂವರೆ ವರ್ಷದ ಈ ಚೌಮುಖಿ ಹುಟ್ಟಿನಿಂದಲೂ ಹೀಗೆ ಇದ್ದು, ತಂದೆ ಬಸಂತ್ ಕೂಲಿ ಕಾರ್ಮಿಕ ಆಗಿರುವುದರಿಂದ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ತಮಗೆ ಸಹಾಯ ನೀಡುವಂತೆ ಜಿಲ್ಲಾಡಳಿತದ ಮೊರೆ ಸಹ ಹೋಗಿದ್ದರು. ಆದರೆ, ಅವರಿಗೆ ಯಾವುದೇ ರೀತಿಯ ಸಹಾಯಹಸ್ತ ಸಿಕ್ಕಿರಲಿಲ್ಲ.
ಮಗು ಹುಟ್ಟಿದ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ನಮ್ಮಲ್ಲಿ ಹಣದ ಕೊರತೆಯಿಂದ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರಾಕರಿಸಿದರು ಎಂದು ಬಸಂತ್ ಹೇಳಿದ್ದಾರೆ. ಹೀಗಾಗಿ, ಇದೀಗ ಜಿಲ್ಲಾಡಳಿತದ ನೆರವು ಕೋರಲೆಂದು ಮಗುವಿನ ಸಮೇತವಾಗಿ ಈ ದಂಪತಿ ನವಾಡ ಜಿಲ್ಲಾ ಕೇಂದ್ರಕ್ಕೆ ಬಂದಿದ್ದರು.
ಇದನ್ನೂ ಓದಿ: ಹುಟ್ಟಿನಿಂದಲೇ ಈ ಮಗುವಿಗೆ 4 ಕೈ - 4 ಕಾಲು: ಶಸ್ತ್ರಚಿಕಿತ್ಸೆಗಾಗಿ ಬಡ ಪೋಷಕರ ಪರದಾಟ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ಕಳೆದ ಕೆಲ ದಿನಗಳ ಹಿಂದೆ ಮಗುವಿನೊಂದಿಗೆ ಪೋಷಕರು ಜಿಲ್ಲಾಡಳಿತ ಕಚೇರಿಗೆ ಬಂದು, ಸಹಾಯಹಸ್ತ ಕೋರಿದ್ದರು. ಈ ವೇಳೆ ಮಗುವಿನ ವಿಡಿಯೋ ಮಾಡಿದ್ದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದರು. ಇದನ್ನ ನೋಡಿರುವ ಸೋನು ಸೂದ್ ನೆರವಿಗೆ ಮುಂದಾಗಿದ್ದಾರೆ. ತಕ್ಷಣವೇ ಅವರ ಕುಟುಂಬದ ಮಾಹಿತಿ ಪಡೆದುಕೊಂಡು, ಶಸ್ತ್ರಚಿಕಿತ್ಸೆಗೋಸ್ಕರ ಮುಂಬೈಗೆ ಕರೆಯಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರ ಕುಟುಂಬದ ಸದಸ್ಯರನ್ನ ಭೇಟಿ ಮಾಡಿದ್ದಾರೆ. ಮಗುವಿಗೆ ಮುಂಬೈನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಆರಂಭಗೊಂಡಿದ್ದು, ಕೆಲ ದಿನಗಳಲ್ಲಿ ಮಗು ಎಲ್ಲರಂತೆ ನಡೆದಾಡಲಿದೆ.
ಇದಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಮಾತನಾಡಿದ್ದು, ಸೋನು ಸೂದ್ ನಮಗೆ ದೇವರು ಇದ್ದಂತೆ. ಇಷ್ಟೆಲ್ಲ ಅವರು ನಮಗೋಸ್ಕರ ಮಾಡ್ತಿದ್ದಾರೆ. ಅವರಿಗೆ ನಾವು ಯಾವಾಗಲೂ ಆಭಾರಿಯಾಗಿರುತ್ತೇವೆ ಎಂದು ತಿಳಿಸಿದ್ದಾರೆ.