ಕರ್ನೂಲ್ (ಆಂಧ್ರ ಪ್ರದೇಶ): ತಮ್ಮ ತೆಲುಗು ದೇಶಂ ಪಕ್ಷ 2024ರಲ್ಲಿ ಅಧಿಕಾರಕ್ಕೆ ಬರದಿದ್ದರೆ, ಅದೇ ನಮ್ಮ ಕಡೆಯ ಚುನಾವಣೆ ಆಗಲಿದೆ ಎಂದು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
ಕರ್ನೂಲ್ನಲ್ಲಿ ಬುಧವಾರ ರಾತ್ರಿ ರೋಡ್ಶೋನಲ್ಲಿ ಭಾವನಾತ್ಮಕವಾಗಿ ಮಾತನಾಡಿರುವ ಅವರು, ಟಿಡಿಪಿ ಮತ್ತೆ ಅಧಿಕಾರಕ್ಕೆ ಬರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ತಮ್ಮ ಹಳೆ ಮಾತನ್ನು ಪುನರುಚ್ಛರಿಸಿದರು.
ನಾನು ಈಗ ಮತ್ತೆ ವಿಧಾನಸಭೆ ಹೋಗಬೇಕು ಎಂದರೆ, ನಾನು ರಾಜಕೀಯದಲ್ಲಿ ಇರಬೇಕು. ಆಂಧ್ರಪ್ರದೇಶಕ್ಕೆ ನ್ಯಾಯ ದೊರಕಿಸಬೇಕು ಎಂದರೆ ಮುಂದಿನ ಚುನಾವಣೆಯಲ್ಲಿ ನೀವು ನಮಗೆ ಗೆಲುವು ನೀಡಬೇಕು. ಅದು ನನ್ನ ಕಡೆ ಚುನಾವಣೆ ಆಗಲಿದೆ ಎಂದ ಅವರು, ನೀವು ನನಗೆ ಆಶೀರ್ವಾದ ಮಾಡುತ್ತೀರಾ? ನನ್ನ ನಂಬುತ್ತೀರಾ ಎಂದು ಜನತೆಗೆ ಪ್ರಶ್ನಿಸಿದರು. ಈ ವೇಳೆ ಜನರಿಂದ ಹರ್ಘೋದ್ಘಾರಗಳು ಕೇಳಿಬಂದಿದೆ.
ಸದನದಲ್ಲಿ ಆಡಳಿತಾರೂಢ ಪಕ್ಷ ವೈಎಸ್ಆರ್ ಕಾಂಗ್ರೆಸ್ ನನ್ನ ಹೆಂಡತಿಗೆ ಅವಮಾನ ಮಾಡಿತು. ಆಗ ಅಂದರೆ ನ.19, 2021ರಲ್ಲಿ ವಿಪಕ್ಷ ನಾಯಕ, ತಾವು ಅಧಿಕಾರಕ್ಕೆ ಮರಳಿದ ಬಳಿಕವೇ ಆಂಧ್ರ ಪ್ರದೇಶ ವಿಧಾನಸಭೆ ಪ್ರವೇಶಿಸುವುದು ಎಂದು ಶಪಥ ಮಾಡಿದರು. ತಮ್ಮ ಶಪಥವನ್ನು ರೋಡ್ ಶೋನಲ್ಲಿ ಪದೇ ಪದೇ ನೆನಪಿಸಿದ ನಾಯ್ಡು, ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿ ಅಧಿಕಾರ ನೀಡದಿದ್ದರೆ, ಅದೇ ತಮ್ಮ ಕೊನೆಯ ಚುನಾವಣೆ ಎಂದರು.
ನಾನು ಸರಿಯಾದ ರೀತಿಯಲ್ಲಿ ಆಡಳಿತವನ್ನು ನಡೆಸುವ ಮೂಲಕ ರಾಜ್ಯವನ್ನು ಪ್ರಗತಿಯ ಹಾದಿಗೆ ತರುತ್ತೇನೆ. ಬಳಿಕ ಭವಿಷ್ಯವನ್ನು ಇತರರಿಗೆ ಹಸ್ತಾಂತರಿಸುತ್ತೇನೆ. ಇದು ಪ್ರತಿಯೊಬ್ಬರ ಮನೆಯಲ್ಲಿ ಚರ್ಚಿತ ವಿಷಯವಾಗಬೇಕು. ನನ್ನ ಹೋರಾಟ ಮುಂದಿನ ಪೀಳಿಗೆ ಮಕ್ಕಳು, ರಾಜ್ಯಕ್ಕೆ. ಇದು ದೊಡ್ಡ ಮಾತಲ್ಲ. ಇದನ್ನು ನಾನು ಈಗಾಗಲೇ ಮಾಡಿದ್ದೇನೆ. ಇದರ ನಿದರ್ಶನ ಕಾಣಬಹುದು. ಇದರ ಬಗ್ಗೆ ಚಿಂತಿಸಿ, ಸರಿ- ತಪ್ಪುಗಳ ತುಲನೆ ಮಾಡಿ. ಇಂದು ನಾನು ಮಾತನಾಡುತ್ತಿರುವುದು ಸರಿ ಎಂದರೆ ನನಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಇದೇ ವೇಳೆ ತಾವು ಮಾನಸಿಕವಾಗಿ ಆರೋಗ್ಯವಾಗಿರುವುದಾಗಿ ತಮ್ಮ ವಯಸ್ಸಿನ ಕುರಿತು ಟೀಕಿಸಿದವರಿಗೆ ಕುಟುಗಿದ ಅವರು, ನಾನು ಮತ್ತು ನರೇಂದ್ರ ಮೋದಿ ಒಂದೇ ವಯಸ್ಸಿನವರು. ಬೈಡನ್ 79ನೇ ವಯಸ್ಸಿನಲ್ಲಿ ಅಮೆರಿಕ ಅಧ್ಯಕ್ಷರಾದರು ಎಂದು ನೆನಪಿಸಿದರು.
ನಾಯ್ಡು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ತಮ್ಮ ಸರ್ಕಾರ ಜಾರಿಗೆ ತಂದ ಉಚಿತ ಯೋಜನೆಗಳನ್ನು ರದ್ದು ಮಾಡುತ್ತಾರೆ ಎಂಬ ವೈಎಸ್ಆರ್ಸಿ ಆರೋಪಕ್ಕೆ ಪ್ರತಿಕ್ರಿಯಿಸಿದ ಟಿಡಿಪಿ ಮುಖ್ಯಸ್ಥ, ತಾವು ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ನಾನು ರಾಜ್ಯದ ಆರ್ಥಿಕವಾಗಿ ಸುಭಿಕ್ಷ ಬೆಳವಣಿಗೆ ಮಾಡುತ್ತೇನೆ. ಇದರಿಂದ ಆದಾಯ ಹೆಚ್ಚಲಿದ್ದು. ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ತರುತ್ತೇನೆ. ನಾವು ಅವರಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇವೆ. ಆದರೆ, ಅದಕ್ಕಾಗಿ ಹೆಚ್ಚಿನ ಸಾಲ ಮಾಡುವುದಿಲ್ಲ ಎಂದು ಮಾಜಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಈ ಮೂಲಕ ರಾಜ್ಯ ಸರ್ಕಾರ ಹಣವನ್ನು ವಿವೇಚನೆ ಇಲ್ಲದೇ ಪಡೆಯುತ್ತಿದ್ದು, ಇದು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಇದಕ್ಕಾಗಿ ರಾಜ್ಯದ ಆಸ್ತಿಗಳನ್ನು ಅಡಮಾನ ಇಡಲಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಕರ್ನಾಟಕದ ಮಹಿಳೆ