ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ ವೇಳೆ, ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದಲ್ಲಿ ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ನಡೆಯುತ್ತಿದೆ ಎಂದು ಆರೋಪಿದ್ದಾರೆ. ಹಾಗೆ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಕೂಡಾ ಪ್ರಸ್ತಾಪಿಸಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವಂತೆ ಒತ್ತಾಯಿಸಿದ ಅವರು, ಆಂಧ್ರಪ್ರದೇಶ ರಾಜ್ಯದಲ್ಲಿ ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ಮತ್ತು ಮಾಫಿಯಾ ಗ್ಯಾಂಗ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ತಿಳಿಸಲು ನಾವು ರಾಷ್ಟ್ರಪತಿಯನ್ನು ಭೇಟಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಆಂಧ್ರಪ್ರದೇಶದಿಂದ ಭಾರತದಾದ್ಯಂತ ಡ್ರಗ್ ಸಾಗಣೆಯಾಗುತ್ತಿದೆ. ಈಗ ವಿದೇಶಗಳಿಗೂ ಸಾಗಿಸಲಾಗುತ್ತಿದೆ. ಇದು ರಾಷ್ಟ್ರೀಯ ಸಮಸ್ಯೆ, ಆಂಧ್ರವನ್ನು ಮಾದಕ ವಸ್ತು ಮುಕ್ತಗೊಳಿಸಲು ನಾವು ಹೋರಾಡುತ್ತಿದ್ದೇವೆ ಎಂದ ಅವರು, ಆಂಧ್ರಪ್ರದೇಶ ಮತ್ತು ಭಾರತದ ಇತಿಹಾಸದಲ್ಲಿ ಯಾವುದೇ ರಾಜಕೀಯ ಪಕ್ಷವು ಮತ್ತೊಂದು ಪಕ್ಷದ ಕಚೇರಿಯ ಮೇಲೆ ದಾಳಿ ಮಾಡಿಲ್ಲ ಎಂದು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.
ಆಂಧ್ರ ಡಿಜಿಪಿ ಸಿಎಂ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ಇದನ್ನೆಲ್ಲ ನಿರ್ವಹಿಸುತ್ತಿದ್ದಾರೆ. ನಾವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗಾಗಿ ರಾಷ್ಟ್ರಪತಿಗಳಿಗೆ ಮತ್ತು ಸಿಬಿಐ ತನಿಖೆಗೆ ಅಪರಾಧಿಗಳನ್ನು ಶಿಕ್ಷಿಸಲು ಕೋರಿದ್ದೇವೆ ಎಂದು ವಿವರಿಸಿದರು.