ಶಿಮ್ಲಾ, ಹಿಮಾಚಲ ಪ್ರದೇಶ: ಚಂಡೀಗಢ ವಿವಿ ಹುಡುಗಿಯರ ಸ್ನಾನದ ವಿಡಿಯೋ ವೈರಲ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಂಧಿತರಾಗಿರುವ ಮೂವರಲ್ಲಿ ಯುವಕನೊಬ್ಬ ತನ್ನ ಆರೋಪಿ ಗೆಳತಿಗೆ ಬೇರೆ ಹುಡುಗಿಯರ ಖಾಸಗಿ ವಿಡಿಯೋ ಮಾಡಲು ಒತ್ತಾಯಿಸಿದ್ದ. ಇದರಿಂದ ಆಕೆ ವಿಡಿಯೋ ಮಾಡಿದ್ದಳು ಎಂದು ಗೊತ್ತಾಗಿದೆ.
ಆರೋಪಿ ಸನ್ನಿ ಮೆಹ್ತಾ, ಆತನ ಸ್ನೇಹಿತ ರಂಕಜ್ ಮತ್ತು ವಿದ್ಯಾರ್ಥಿನಿಯನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಸನ್ನಿ ಮತ್ತು ರಂಕಜ್ ಒತ್ತಾಯಿಸಿದ್ದರು. ಬ್ಲ್ಯಾಕ್ಮೇಲ್ ಮಾಡಿದ ಕಾರಣಕ್ಕಾಗಿ ತಾನು ವಿಡಿಯೋವನ್ನು ಮಾಡಿ ಆತನಿಗೆ ಕಳುಹಿಸಿದ್ದೆ ಎಂದು ಆರೋಪಿ ವಿದ್ಯಾರ್ಥಿನಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದರು.
ತನಿಖೆಯ ವೇಳೆ ಬಾಲಕಿಯ ಮೊಬೈಲ್‌ನಲ್ಲಿ ಈ ಬಗ್ಗೆ ಚಾಟ್ ಮಾಡಿದ ಮೆಸೇಜ್ಗಳು ಸಿಕ್ಕಿವೆ. ಆರೋಪಿ ಸನ್ನಿ ಮೆಹ್ತಾ ಬೇರೆ ಹುಡುಗಿಯರ ವಿಡಿಯೋವನ್ನು ಸೆರೆ ಹಿಡಿಯುವಂತೆ ಕೇಳಿದ್ದು ಇದರಲ್ಲಿದೆ. ಇದಲ್ಲದೇ, ಮೋಹಿತ್ ಎಂಬ ಮತ್ತೊಬ್ಬ ಹುಡುಗನ ಜೊತೆಗೂ ಚಾಟ್ ಮಾಡಿದ್ದಾನೆ. ಈ ಮೋಹಿತ್ ಯಾರು ಅಥವಾ ಇದು ನಕಲಿ ಖಾತೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.
ಪ್ರಕರಣದ ಟೈಮ್ಲೈನ್
- ಶುಕ್ರವಾರ ಮಧ್ಯಾಹ್ನ 3 ಗಂಟೆಗೆ, 5 ಹುಡುಗಿಯರು ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ವಾರ್ಡನ್‌ಗೆ ವಿದ್ಯಾರ್ಥಿನಿಯೊಬ್ಬಳು ತಮ್ಮ ಸ್ನಾನದ ವಿಡಿಯೋ ಮಾಡಿದ್ದಾರೆ ಎಂದು ದೂರು ನೀಡಿದರು.
- ಆರೋಪಿ ವಿದ್ಯಾರ್ಥಿನಿಯನ್ನು ಇತರ ವಿದ್ಯಾರ್ಥಿಗಳು ಮತ್ತು ವಾರ್ಡನ್ ವಿಚಾರಿಸಿದಾಗ ವಿಡಿಯೋ ಶಿಮ್ಲಾದ ಗೆಳೆಯನಿಗೆ ಕಳುಹಿಸಿದ್ದಾಗಿ ತಪ್ಪೊಪ್ಪಿಕೊಂಡಳು.
- ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಹಾಸ್ಟೆಲ್ ಮುಂದೆ ಗಲಾಟೆ ಮಾಡಿದರು. ಸ್ಥಳಕ್ಕೆ ಬಂದ ಪೊಲೀಸರ ಜೊತೆಗೂ ಕಿತ್ತಾಟ, ದೊಂಬಿ ತಡೆಯಲು ಪೊಲೀಸರಿಂದ ಲಾಠಿ ಪ್ರಹಾರ.
- ಭಾನುವಾರ ಹಾಸ್ಟೆಲ್ನಲ್ಲಿ ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿದಾಗ ತಾನು ವಿಡಿಯೋ ಕಳುಹಿಸಿದ ಹುಡುಗನ ಫೋಟೋ ತೋರಿಸಿದ ವೈರಲ್ ಹುಡುಗಿ.
- ಗಲಾಟೆಯಲ್ಲಿ ಕೂಗಾಡಿ ಅಸ್ವಸ್ಥರಾಗಿದ್ದ ಹುಡುಗಿಯರು ಬಳಲಿ ಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ರವಾನೆ. ಆತ್ಮಹತ್ಯೆ ಯತ್ನ ವದಂತಿ, ತಿರಸ್ಕರಿಸಿದ ವಿವಿ ಆಡಳಿತ ಮಂಡಳಿ.
- ವೈರಲ್ ಹುಡುಗಿಯ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು, ಬಳಿಕ ಆರೋಪಿಯನ್ನು ಬಂಧಿಸಿದ್ದರು. ಐಟಿ ಕಾಯಿದೆ ಮತ್ತು ಇತರರ ಖಾಸಗಿತನ ಉಲ್ಲಂಘಿಸಿದ್ದಕ್ಕಾಗಿ ಕೇಸ್ ಹಾಕಲಾಗಿದೆ.
- ಹಿಮಾಚಲ ಪೊಲೀಸರ ಸಹಾಯದಿಂದ ಪಂಜಾಬ್ ಪೊಲೀಸರು ವೈರಲ್ ಹುಡುಗಿಯರ ಗೆಳೆಯರಾದ ಸನ್ನಿ ಮೆಹ್ತಾ ಮತ್ತು ರಂಕಜ್ ವರ್ಮಾ ಬಂಧಿಸಿದ್ದು, ಪಂಜಾಬ್‌ಗೆ ಕರೆತರಲಾಗಿದೆ.
- ಪೊಲೀಸ್ ಮತ್ತು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ವಿರುದ್ಧ ಅತೃಪ್ತರಾದ ವಿದ್ಯಾರ್ಥಿನಿಯರಿಂದ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಮತ್ತೆ ಪ್ರತಿಭಟನೆ ನಡೆದಿದೆ.
- ವೈರಲ್ ಹುಡುಗಿ ವಿರುದ್ಧ ಕ್ರಮಕ್ಕೆ ಭರವಸೆ ನೀಡಿದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ. ಬಳಿಕ ಮುಷ್ಕರ ಅಂತ್ಯಗೊಳಿಸಿದ ವಿದ್ಯಾರ್ಥಿನಿಯರು.
- ಬಂಧಿತರಾದ ಮೂವರು ಆರೋಪಿಗಳು ಸೋಮವಾರ ನ್ಯಾಯಾಲಯಕ್ಕೆ ಹಾಜರು. 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್.
ಓದಿ: ಬಾತ್ ರೂಂ ವಿಡಿಯೋ ರೆಕಾರ್ಡ್ ಮಾಡಲು ಯತ್ನ: ಐಐಟಿ ಬಾಂಬೆ ಹಾಸ್ಟೆಲ್ ಕ್ಯಾಂಟೀನ್ ಬಾಯ್ ಬಂಧನ