ಚಂಡೀಗಢ: ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಚಂಡೀಗಢ ಪೊಲೀಸರು ರಾಷ್ಟ್ರೀಯ ಅಥ್ಲೀಟ್ ಮತ್ತು ಜೂನಿಯರ್ ಮಹಿಳಾ ಕೋಚ್ ನೀಡಿದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ವಿವಿಧ ಸೆಕ್ಷನ್‌ಗಳಡಿ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಿಸಿದ್ದಾರೆ.
ರಾಷ್ಟ್ರೀಯ ಅಥ್ಲೀಟ್ ಮತ್ತು ಜೂನಿಯರ್ ಕೋಚ್‌ವೊಬ್ಬರು, ಸಂದೀಪ್ ಸಿಂಗ್ ನನ್ನನ್ನು ತಮ್ಮ ನಿವಾಸಕ್ಕೆ ಕರೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಚಂಡೀಗಢ ಸೆಕ್ಟರ್-26 ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354, 354ಎ, 354ಬಿ, 342 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಂದೀಪ್ ಸಿಂಗ್ ಇನ್‌ಸ್ಟಾಗ್ರಾಮ್ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ನಾನು ಅವರ ಮಾತನ್ನು ಕೇಳಿದರೆ ನನಗೆ ಎಲ್ಲಾ ಸೌಲ್ಯಭ್ಯಗಳು ಮತ್ತು ಪೋಸ್ಟಿಂಗ್ ಬಯಸಿದ ಸ್ಥಳದಲ್ಲಿ ಸಿಗುತ್ತದೆ ಎಂದು ಹೇಳಿದ್ದರು. ಆದರೆ ನಾನು ಇದಕ್ಕೆ ಒಪ್ಪದಿದ್ದಾಗ ನನ್ನನ್ನು ವರ್ಗಾವಣೆ ಮಾಡಿ ತರಬೇತಿಯನ್ನೂ ನಿಲ್ಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಅಲ್ಲದೇ, ಈ ಕುರಿತು ನಾನು ಡಿಜಿಪಿ ಕಚೇರಿ, ಸಿಎಂ ಗೃಹ ಹಾಗೂ ಗೃಹ ಸಚಿವ ಅನಿಲ್ ವಿಜ್ ಅವರಿಗೆ ದೂರು ನೀಡಲು ಎಲ್ಲ ಹಂತದಲ್ಲೂ ಪ್ರಯತ್ನಿಸಿದ್ದೆ. ಆದರೆ ವಿಚಾರಣೆ ನಡೆಯಲಿಲ್ಲ ಎಂದು ತನಗಾದ ಅಸಹಾಯಕತೆ ಹೇಳಿಕೊಂಡಿದ್ದಾರೆ. ಮುಖ್ಯವಾಗಿ ಆಕೆಯ ದೂರಿನಲ್ಲಿ, ತನಗಾದ ರೀತಿಯಲ್ಲೇ ಇತರ ಹಲವು ಮಹಿಳಾ ಆಟಗಾರ್ತಿಯರ ಮೇಲೂ ಕೃತ್ಯ ಎಸಗಿದ್ದರೂ ಅವರು ಹೇಳಲು ಮುಂದೆ ಬಂದಿಲ್ಲ ಎಂದಿದ್ದಾರೆ.
'ಆಧಾರರಹಿತ ಆರೋಪ': ಕ್ರೀಡಾ ಸಚಿವ ಸಂದೀಪ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚೆಗೆ ಮಾತನಾಡಿ, ರಾಷ್ಟ್ರೀಯ ಅಥ್ಲೀಟ್ ಮಾಡಿರುವ ಆರೋಪ ನಿರಾಧಾರ. ಈ ವಿಚಾರದಲ್ಲಿ ವಿರೋಧ ಪಕ್ಷದವರೂ ಶಾಮೀಲಾಗಿರುವಂತೆ ಕಾಣುತ್ತಿದೆ. ಈ ಪ್ರಕರಣದ ತನಿಖೆ ನ್ಯಾಯಯುತವಾಗಿ ನಡೆಯಬೇಕು. ಇದಕ್ಕಾಗಿ ಸ್ವತಃ ಮುಖ್ಯಮಂತ್ರಿಯವರಿಗೂ ಮನವಿ ಮಾಡುತ್ತೇನೆ. ಏಕೆಂದರೆ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದಿದ್ದರು.
ಇದನ್ನೂಓದಿ: 6 ರೂಪಾಯಿ ಕೇಳಿ ₹18 ಸಾವಿರ ಎಗರಿಸಿದ ಖದೀಮ! ಆನ್ಲೈನ್ ಮೂಲಕ ಮಹಿಳೆಗೆ ಮೋಸ