ಚಂಡೀಗಢ : ದೊಡ್ಡ ದೊಡ್ಡ ಉದ್ಯಮಿಗಳಿಗೆ ದರೋಡೆಕೋರರು ಫೋನ್ ಮೂಲಕ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವ ಸುದ್ದಿಗಳನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಬೆದರಿಕೆ ಹಾಕಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ. ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಆಗಿ ನೇಮಕಗೊಂಡ ಎಸ್‌ಐ ನವೀನ್ ಫೋಗಟ್ ಮತ್ತು ಅವರ ಸಹೋದ್ಯೋಗಿಗಳು ಪಂಜಾಬ್‌ನ ಪ್ರಸಿದ್ಧ ಉದ್ಯಮಿಯೊಬ್ಬರಿಂದ ಒಂದು ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಎಂಬ ಅಂಶ ಬಯಲಾಗಿದೆ.
ಮಾಹಿತಿಯ ಪ್ರಕಾರ, ಸೆಕ್ಟರ್ 39 ಎಸ್‌ಹೆಚ್‌ಒ ನವೀನ್ ಫೋಗಟ್ ತನ್ನ ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ಶುಕ್ರವಾರ ಬಟಿಂಡಾ ಉದ್ಯಮಿಯಿಂದ 1 ಕೋಟಿ ರೂ. ಪಡೆದ ವಿಷಯವನ್ನು ಚಂಡೀಗಢ ಪೊಲೀಸರು ಪತ್ತೆಹಚ್ಚಿದ್ದಾರೆ. ಬಳಿಕ, ಈ ಕುರಿತು ಚಂಡೀಗಢದ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್ ಅವರಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಇದಾದ ನಂತರ, ನವೀನ್ ಫೋಗಟ್ ಮತ್ತು ಅವರ ತಂಡದ ವಿರುದ್ಧ ಒಂದು ಕೋಟಿ ರೂಪಾಯಿ ದರೋಡೆ ಪ್ರಕರಣವನ್ನು ಸೆಕ್ಟರ್ -39 ಪೊಲೀಸ್ ಠಾಣೆಯಲ್ಲಿಯೇ ಎಸ್‌ಎಸ್‌ಪಿ ಅವರೇ ದಾಖಲಿಸಿದ್ದಾರೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್, "ಬಟಿಂಡಾದ ಉದ್ಯಮಿಯಿಂದ 1 ಕೋಟಿ ರೂಪಾಯಿ ಲೂಟಿ ಮಾಡಿದ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಸೆಕ್ಟರ್ 41 ಪೊಲೀಸ್ ತಂಡವು ಯಶಸ್ಸು ಗಳಿಸಿದೆ. ಪ್ರಕರಣದಲ್ಲಿ ಭಾಗಿಯಾದ ಭದ್ರತಾ ವಿಭಾಗದ ಕಾನ್ಸ್ಟೇಬಲ್ ವರೀಂದರ್ ಮತ್ತು ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಎಸ್‌ಐ ನವೀನ್ ಫೋಗಟ್ ಅವರನ್ನು ಭಾನುವಾರ ಎರಡನೇ ಬಾರಿಗೆ ಸೇವೆಯಿಂದ ವಜಾಗೊಳಿಸಲಾಗಿದೆ. ಜೊತೆಗೆ, ಬಂಧಿತರಿಂದ ಲೂಟಿ ಮಾಡಿದ 75 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಾಹಿತಿಯ ಪ್ರಕಾರ, ಆರೋಪಿ ಕಾನ್ಸ್ಟೇಬಲ್ ವರೀಂದರ್ ಅವರ ಫೋಟೋವನ್ನು ಉತ್ತಮವಾಗಿ ಕೆಲಸ ಮಾಡಿದ್ದಕ್ಕಾಗಿ ಸೆಕ್ಟರ್ -39 ಪೊಲೀಸ್ ಠಾಣೆಯಲ್ಲಿ ಅಂಟಿಸಲಾಗಿತ್ತು. ದೂರುದಾರ ನರೇಂದ್ರ ಪಾಟಿಯಲ್ ಅವರು ಪೊಲೀಸ್ ಠಾಣೆಯಲ್ಲಿ ವರೀಂದರ್ ಫೋಟೋವನ್ನು ಗುರುತಿಸಿದ್ದರು. ಇದಾದ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದಾನೆ. ಮತ್ತೋರ್ವ ಆರೋಪಿ ಶಿವಕುಮಾರ್ ಹೆಚ್ಚಾಗಿ ಎಸ್‌ಹೆಚ್‌ಒ ನವೀನ್ ಫೋಗಟ್ ಜೊತೆ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ. ವಿಷಯ ಬೆಳಕಿಗೆ ಬಂದ ನಂತರ ನವೀನ್ ಫೋಗಟ್ ತನ್ನ ಸಹೋದ್ಯೋಗಿಗಳ ಸಮ್ಮುಖದಲ್ಲಿ ಠಾಣೆಯಿಂದ ಪರಾರಿಯಾಗಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಉದ್ಯೋಗಿಗಳ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಡಿಎಸ್‌ಪಿ ಚರಂಜಿತ್ ಸಿಂಗ್ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ? : ಆಗಸ್ಟ್ 4 ರಂದು ಬಟಿಂಡಾದ ನಿವಾಸಿ ಸಂಜಯ್ ಗೋಯಲ್ ಅವರು 2000 ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸುವ ಕೆಲಸವನ್ನು ತಮ್ಮ ಸ್ನೇಹಿತರಿಗೆ ವಹಿಸಿ, ಒಂದು ಕೋಟಿ ಒಂದು ಲಕ್ಷ ರೂಪಾಯಿಗಳೊಂದಿಗೆ ಮೊಹಾಲಿಗೆ ತೆರಳಿದ್ದರು. ಮೊಹಾಲಿಯ ಏರೋಸಿಟಿಯಲ್ಲಿರುವ ಬ್ರೈಟ್ ಇಮಿಗ್ರೇಷನ್ ತಲುಪಿದ ನಂತರ ಸರ್ವೇಶ್ ಎಂಬ ವ್ಯಕ್ತಿ ಉದ್ಯಮಿ ಸಂಜಯ್ ಗೋಯಲ್ ಅವರನ್ನು ಸೆಕ್ಟರ್ 40ಗೆ ಕರೆದೊಯ್ದರು. ಅಲ್ಲಿ ಸಂಜಯ್ ಗೋಯಲ್ಗೆ ಗಿಲ್ ಎಂಬ ವ್ಯಕ್ತಿಯನ್ನು ಪರಿಚಯಿಸಲಾಯಿತು.
ಇದೇ ವೇಳೆ, ಅಲ್ಲೇ ಸಮವಸ್ತ್ರದಲ್ಲಿದ್ದ ಇನ್ಸ್‌ಪೆಕ್ಟರ್ ಹಾಗೂ ಮೂವರು ಪೊಲೀಸರು ಸಂಜಯ್ ಗೋಯಲ್ ಅವರ ಕಾರಿನ ಬಳಿ ಹೋದರು. ಬಳಿಕ ಸಂಜಯ್ ಮತ್ತು ಅವರ ಚಾಲಕನನ್ನು ಹಿಡಿದು ವಾಹನದಿಂದ ಕೆಳಗಿಳಿಯುವಂತೆ ಸೂಚಿಸಿ ತಪಾಸಣೆ ನಡೆಸಿದ್ದಾರೆ. ಬಳಿಕ ಪೊಲೀಸರು ಹಣ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ನಾಲ್ಕು ಜೋಡಿ ಶೂಗಳು ದೋಚಿದ್ದ ಇಬ್ಬರಿಗೆ ಏಳು ವರ್ಷ ಜೈಲು : ₹ 41 ಸಾವಿರ ದಂಡ ಹಾಕಿದ ಕೋರ್ಟ್
ಪೊಲೀಸರ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದ ಸಂಜಯ್ ಗೋಯಲ್ ಘಟನೆಯ ಬಗ್ಗೆ ತಮ್ಮ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಬಳಿಕ ಅವರು ಚಂಡೀಗಢದ ಎಸ್‌ಎಸ್‌ಪಿಗೆ ದೂರು ನೀಡಿದ್ದು, ನಂತರ ಸೆಕ್ಟರ್ -39 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್-356, 386, 420, 506 ಮತ್ತು 120 ಬಿ ಅಡಿ ದೂರು ದಾಖಲಾಗಿದೆ. ಮಾಹಿತಿ ಪ್ರಕಾರ, ಈ ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆಯೂ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ.