ಅಮರಾವತಿ(ಆಂಧ್ರಪ್ರದೇಶ): ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಜಗನ್ ಅವರ ಆಪ್ತ ಮತ್ತು ಪುಲಿವೆಂದುಲ ವಿಧಾನಸಭಾ ಕ್ಷೇತ್ರದ ಚಕ್ರಾಯಪೇಟ ಮಂಡಲದ ಪಕ್ಷದ ಉಸ್ತುವಾರಿ ವೈ.ಎಸ್.ಕೊಂಡಾರೆಡ್ಡಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ವೈಎಸ್ಆರ್ ಜಿಲ್ಲೆ ಚಕ್ರಾಯಪೇಟ ವಲಯದಲ್ಲಿ ಎಸ್ಆರ್ಕೆ ಕನ್ಸ್ಟ್ರಕ್ಷನ್ ಕಂಪನಿ ರಾಯಚೋಟಿ-ಪುಲಿವೆಂದುಲ ರಸ್ತೆ ಕಾಮಗಾರಿ ನಡೆಸುತ್ತಿದೆ. ಈ ಕಾಮಗಾರಿಯ ವೇಳೆ ಹಣಕ್ಕಾಗಿ ಕೊಂಡಾರೆಡ್ಡಿ ಬೇಡಿಕೆ ಇಟ್ಟಿದ್ದು, ಚಕ್ರಾಯಪೇಟೆ ವಲಯದಲ್ಲಿ ಕೆಲಸ ಮಾಡಬೇಕಾದರೆ ಹಣ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದು ಕನ್ಸ್ಟ್ರಕ್ಷನ್ ಕಂಪನಿಯ ಗುತ್ತಿಗೆದಾರರು ಚಕ್ರಾಯಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದು, ಕೊಂಡಾರೆಡ್ಡಿಯನ್ನು ಬಂಧಿಸಿದ್ದಾರೆ.
ಎಸ್ಆರ್ಕೆ ಕನ್ಸ್ಟ್ರಕ್ಷನ್ ಕಂಪನಿ ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದಾಗಿದ್ದು, ಆ ಬಿಜೆಪಿ ನಾಯಕರು ಕೊಂಡಾರೆಡ್ಡಿಯ ಬೆದರಿಕೆ ಕುರಿತು ಈ ಮೊದಲೇ ಆಂಧ್ರ ಸಿಎಂ ಜಗನ್ಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಂಡಾರೆಡ್ಡಿಯನ್ನು ಬಂಧಿಸಿದ್ದು, ಲಕ್ಕಿರೆಡ್ಡಿಪಲ್ಲೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಡಪ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಅನ್ಬುರಾಜನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತನ್ನನ್ನು ಮದುವೆಯಾಗುವಂತೆ ನಿರ್ಮಾಪಕನ ಕಚೇರಿ ಎದುರು ಮಹಿಳಾ ಜ್ಯೂನಿಯರ್ ಆರ್ಟಿಸ್ಟ್ ನಗ್ನ ಹೋರಾಟ!