ರಾಯ್‌ಪುರ (ಛತ್ತೀಸ್ಗಢ): ಕೃಷಿ ಭೂಮಿ ಹೊಂದಿರದ ಕುಟುಂಬಗಳಿಗೆ ವಾರ್ಷಿಕವಾಗಿ ಆರು ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಸಿಎಂ ಭೂಪೇಶ್ ಬಘೇಲ್ ಸರ್ಕಾರ ಘೋಷಿಸಿದೆ. ಭೂಪೇಶ್ ಬಘೇಲ್ ಸರ್ಕಾರ ಬುಧವಾರ 2021-22 ರ ಸಾಲಿನ 2,485.59 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದೆ.
ರಾಜೀವ್ ಗಾಂಧಿ ಗ್ರಾಮೀಣ ಭೂಮಿಹೀನ ಕೃಷಿ ಮಜ್ದೂರ್ ನ್ಯಾಯ ಯೋಜನೆ ಪ್ರಾರಂಭಿಸಲಾಗುವುದು. ಇದರ ಅಡಿ ಕೃಷಿ ಭೂಮಿ ಹೊಂದಿರದ ಮತ್ತು ಕೂಲಿ ಮಾಡುವ ಕುಟುಂಬಗಳಿಗೆ ಆರು ಸಾವಿರ ರೂಪಾಯಿ ನೀಡಲಾಗುವುದು ಎಂದರು. ಗ್ರಾಮೀಣ ಪ್ರದೇಶದ ಕ್ಷೌರಿಕರು, ಅಗಸ, ಕಮ್ಮಾರ, ಪುರೋಹಿತರು ಸಹ ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 200 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ರಾಜ್ಯದಿಂದ 60 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಸಲು ಕೇಂದ್ರವು ಸಮ್ಮತಿಸಿತ್ತು. ಆದರೆ, ಕೇವಲ 24 ಲಕ್ಷ ಮೆಟ್ರಿಕ್ ಟನ್ ಮಾತ್ರ ಖರೀದಿಸಿದೆ. ಇದರಿಂದಾಗಿ ರಾಜ್ಯಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ಬಘೇಲ್ ಹೇಳಿದರು. ಇದರ ಹೊರತಾಗಿಯೂ, ನಾವು ಸಾಲ ತೆಗೆದುಕೊಳ್ಳುವ ಮೂಲಕ ಪ್ರತಿಯೊಂದು ಹಂತದಲ್ಲೂ ರೈತರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಕೆಲ ಸಮಸ್ಯೆಗಳು ಎದುರಾಗಿದ್ದವು. ಆದರೆ, ಈಗ ರಾಜ್ಯಾದ್ಯಂತ ಉತ್ತಮ ವೈದ್ಯಕೀಯ ಸೌಲಭ್ಯಗಳ ಲಭ್ಯತೆ ಇರುವಂತೆ ನೋಡಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ. ಇದಕ್ಕಾಗಿ 957 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದರು.
ಇದನ್ನೂ ಓದಿ: ಖತರ್ನಾಕ್ ಕಿಲ್ಲರ್ ದಂಪತಿ.. ಗಂಡ 8, ಹೆಂಡ್ತಿ 12, ಇದು ಇವರ Murder ಟ್ರ್ಯಾಕ್ ರೆಕಾರ್ಡ್!
ಕೋವಿಡ್ ಎರಡನೇ ಅಲೆಯ ಸಮಯದಲ್ಲಿ, ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದೆ. ಇದರ ಜತೆಗೆ ಇತರ ರಾಜ್ಯಗಳಿಗೂ ಆಕ್ಸಿಜನ್ ಪೂರೈಸಿದೆ ಎಂದು ಹೇಳಿ ಅಧಿವೇಶನದ ಗಮನ ಸೆಳೆದರು. ಲಾಸ್ಪುರ ಜಿಲ್ಲೆಯ ನಾಗೋಯಿ ಗ್ರಾಮದಲ್ಲಿ 126 ಕೋಟಿ ರೂ.ಗಳ ವೆಚ್ಚದಲ್ಲಿ 1,500 ಕೈದಿಗಳು ವಾಸಿಸುವ ವಿಶೇಷ ಜೈಲು ನಿರ್ಮಾಣಕ್ಕೂ ಅನುಮತಿ ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.