ನವದೆಹಲಿ : ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂಬ ಚರ್ಚೆಗಳು ನಡೆಯುತ್ತಿರುವ ಮಧ್ಯೆ, ಮಕ್ಕಳಿಗೆ ಕೋವಿಡ್ ದೃಢಪಟ್ಟರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯ ಮಕ್ಕಳ ಚಿಕಿತ್ಸೆಗೆ ರೆಮ್ಡಿಸಿವಿರ್ ಹೇಗೆ ಬಳಸಬೇಕು ಎಂಬುದರ ಬಗ್ಗೆ ಸಲಹೆಯನ್ನೂ ನೀಡಿದೆ.
ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬ ವಾದಕ್ಕೆ ಬಲವಾದ ಪುರಾವೆ ಇಲ್ಲ ಎಂದು ಕೋವಿಡ್ ಟಾಸ್ಕ್ ಫೋರ್ಸ್ನಲ್ಲಿರುವ ದೇಶದ ಉನ್ನತ ವೈದ್ಯರು ಹೇಳಿದ ನಡುವೆಯೂ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಎರಡನೇ ಅಲೆ ವೇಳೆ ಕೋವಿಡ್ಗೆ ತುತ್ತಾದ ಶೇ 60 ರಿಂದ 70 ರಷ್ಟು ಮಕ್ಕಳು ಅವರಲ್ಲಿನ ಕಡಿಮೆ ರೋಗ ನಿರೋಧಕ ಶಕ್ತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಚ್ಚಿನ ಮಕ್ಕಳು ಸಣ್ಣ ಪುಟ್ಟ ರೋಗಲಕ್ಷಣ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲಾಗದೆ ಶೀಘ್ರ ಚೇತರಿಸಿಕೊಂಡಿದ್ದಾರೆ ಎಂದು ದೆಹಲಿ ಏಮ್ಸ್ನ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಮಕ್ಕಳಿಗೆ ಚಿಕಿತ್ಸೆ ನೀಡುವಾಗ ರೆಮ್ಡಿಸಿವಿರ್ ಮತ್ತು ಸ್ಟಿರಾಯ್ಡ್ ಬಳಸದಂತೆ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ರೆಮ್ಡಿಸಿವಿರ್ ತರ್ತು ಬಳಕೆಗೆ ಮಾತ್ರ ಅವಕಾಶವಿದೆ. 18 ವರ್ಷ ಕೆಳಗಿನ ಮಕ್ಕಳ ಚಿಕಿತ್ಸೆಗೆ ರೆಮ್ಡಿಸಿವಿರ್ ಬಳಸುವುದು ಅಪಾಯಕಾರಿಯಾಗಿದೆ. ಅದೇ ರೀತಿ ಸಣ್ಣಪುಟ್ಟ ರೋಗ ಲಕ್ಷಣ ಇರುವ ಮಕ್ಕಳ ಚಿಕಿತ್ಸೆ ಸ್ಟಿರಾಯ್ಡ್ ಬಳಸದಂತೆ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.