ನವದೆಹಲಿ: ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ ಕೇಂದ್ರ ಗೃಹ ಸಚಿವಾಲಯವು ಐಎಎಸ್ ಅಧಿಕಾರಿಗಳಾದ ಸಂಜೀವ್ ಖಿರ್ವಾರ್ ಮತ್ತು ಪತ್ನಿ ರಿಂಕು ದುಗ್ಗಾ ಅವರನ್ನು ಕ್ರಮವಾಗಿ ದೆಹಲಿಯಿಂದ ಲಡಾಕ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.
ಆರೋಪವೇನು?: ನಾಯಿ ಜೊತೆ ಐಎಎಸ್ ಅಧಿಕಾರಿಗಳಿಬ್ಬರು ವಾಕಿಂಗ್ ಮಾಡಲು ತರಬೇತಿ ಪಡೆಯುತ್ತಿದ್ದ ಅಥ್ಲಿಟ್ಗಳನ್ನೇ ಮೈದಾನದಿಂದ ಪ್ಯಾಕಪ್ ಮಾಡಿಸಿ ಹೊರಕಳುಹಿಸಿದ್ದರು. ಫ್ಲಡ್‌ಲೈಟ್ಸ್ ಮೂಲಕ ಕ್ರೀಡಾಪಟುಗಳಿಗೆ ರಾತ್ರಿ ವೇಳೆಯೂ ತರಬೇತಿ ನೀಡಲಾಗುತ್ತಿತ್ತು. ಆದರೆ ಈ ಅಧಿಕಾರಿಗಳು ತಮ್ಮ ನಾಯಿಯ ಜೊತೆ ಟರ್ಫ್ ಮೇಲೆ ವಾಕಿಂಗ್ ಮಾಡುವ ಸಲುವಾಗಿ ಕ್ರೀಡಾಪಟುಗಳನ್ನೇ ಮನೆಗೆ ಕಳುಹಿಸುತ್ತಿದ್ದರು.! ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಸರ್ಕಾರ ವತಿಯಿಂದ ತ್ಯಾಗರಾಜ ಸ್ಟೇಡಿಯಂನಲ್ಲಿ ಅಥ್ಲೀಟ್ಗಳು ಹಾಗೂ ಕೋಚ್ಗಳಿಗೆ ತರಬೇತಿ ನೀಡಲಾಗುತ್ತಿದೆ.
ಐಎಎಸ್ ಅಧಿಕಾರಿಗಳಾದ ಖಿರ್ವಾರ್ ಮತ್ತು ರಿಂಕು ದುಗ್ಗಾ ತ್ಯಾಗರಾಜ್ ಸ್ಟೇಡಿಯಂನಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಕುರಿತು ಗೃಹ ಸಚಿವಾಲಯವು ದೆಹಲಿ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿತ್ತು. ಮುಖ್ಯ ಕಾರ್ಯದರ್ಶಿ ಅವರು ವಾಸ್ತವ ಸ್ಥಿತಿಯ ಕುರಿತು ಸಂಜೆ ಗೃಹ ಸಚಿವಾಲಯಕ್ಕೆ ವಿವರವಾದ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ನಿನ್ನೆಯೇ ಕೇಂದ್ರ ಕಠಿಣ ಕ್ರಮ ಕೈಗೊಂಡಿದೆ. ಖಿರ್ವಾರ್ ಅವರು ಪ್ರಸ್ತುತ ದೆಹಲಿಯಲ್ಲಿ ಪ್ರಧಾನ ಕಾರ್ಯದರ್ಶಿ (ಕಂದಾಯ) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಐಎಎಸ್ ಅಧಿಕಾರಿಗಳ ಅತ್ಯಂತ ಬೇಜವಾಬ್ದಾರಿಯುತ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ, ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಸುಪ್ರೀಂ ಮಹತ್ವದ ತೀರ್ಪು