ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ 80 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಮುಂದಾಗಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಇಂದಿನಿಂದ (ಮೇ 1) ರಿಂದ ಮುಂದಿನ ಎರಡು ತಿಂಗಳು ಹೆಚ್ಚುವರಿ 5 ಕೆಜಿ ಆಹಾರ ಧಾನ್ಯಗಳನ್ನು ಪಡಿತರ ಅಥವಾ ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡಲಾಗುವುದು.
ಕಳೆದ ವರ್ಷ ಲಾಕ್ಡೌನ್ ಜಾರಿಯಾದಾಗ ಪಿಎಂಜಿಕೆಎವೈ ಯೋಜನೆಯಿಂದಾಗಿ ಅನೇಕ ಬಡವರಿಗೆ ಸಹಾಯವಾಗಿದ್ದು, ಹಲವು ರಾಜ್ಯಗಳ ಕೋರಿಕೆಯ ಮೇರೆಗೆ ಈ ವರ್ಷವೂ ಈ ಯೋಜನೆಯನ್ನು ಮತ್ತೆ ಕಾರ್ಯರೂಪಕ್ಕೆ ತರಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಕುಂಭಮೇಳದಿಂದ ಹಿಂದಿರುಗಿದ 60 ಯಾತ್ರಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್
ಭಾರತದ ಆಹಾರ ನಿಗಮವು (ಎಫ್‌ಸಿಐ) ಎಲ್ಲಾ ರಾಜ್ಯಗಳ ಸಂಪರ್ಕದಲ್ಲಿದ್ದು, 26,000 ಕೋಟಿ ರೂ. ವೆಚ್ಚದಲ್ಲಿ 80 ಲಕ್ಷ ಟನ್ ಆಹಾರ ಧಾನ್ಯಗಳನ್ನು ಪೂರೈಸಲು ಸಜ್ಜಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮಲ್ಲಿ ಸಾಕಷ್ಟು ಧಾನ್ಯಗಳ ಸಂಗ್ರಹವಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
2020ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಪಿಎಂಜಿಕೆಎವೈ ಅಡಿಯಲ್ಲಿ 1.05 ಲಕ್ಷ ಕೋಟಿ ರೂ. ವೆಚ್ಚದಲ್ಲಿ 30 ಮಿಲಿಯನ್ ಟನ್ ಧಾನ್ಯಗಳನ್ನು ಸರ್ಕಾರ ಉಚಿತವಾಗಿ ವಿತರಿಸಿತ್ತು.