ನವದೆಹಲಿ: ಕಪ್ಪು ಶಿಲೀಂಧ್ರ ಅಥವಾ ಮ್ಯೂಕಾರ್ಮೈಕೋಸಿಸ್ ಚಿಕಿತ್ಸೆಗೆ ಬಳಸುವ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಐದು ಕಂಪನಿಗಳಿಗೆ ಪರವಾನಗಿ ನೀಡಿದೆ ಎಂದು ಮೂಲಳಿಂದ ತಿಳಿದುಬಂದಿದೆ.
ಅಮೆರಿಕದ ಗಿಲ್ಯಾಡ್ ಸೈನ್ಸಸ್ ಸಂಸ್ಥೆ ಮೈಲಾನ್ ಮೂಲಕ ಭಾರತಕ್ಕೆ ಇದನ್ನು ಸರಬರಾಜು ಮಾಡುವ ಕೆಲಸ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈವರೆಗೆ ಅಂಬಿಸೋಮ್‌ನ 1,21,000 ಕ್ಕೂ ಹೆಚ್ಚು ಬಾಟಲುಗಳು ಭಾರತವನ್ನು ತಲುಪಿವೆ ಹಾಗೆ ಇನ್ನೂ 85,000 ಔಷಧದ ಬಾಟಲುಗಳು ಬರುವ ಹಂತದಲ್ಲಿವೆ ಎನ್ನಲಾಗಿದೆ.
ಕಂಪನಿಯು 1 ಮಿಲಿಯನ್ ಡೋಸ್ ಆಂಬಿಸೋಮ್ ಅನ್ನು ಭಾರತಕ್ಕೆ ಮೈಲಾನ್ ಮೂಲಕ ಪೂರೈಸಲಿದೆಯಂತೆ.
ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಯಲ್ಲಿ ಬಳಸಲಾಗುವ ಆಂಫೊಟೆರಿಸಿನ್ ಬಿ ಯ ಹೆಚ್ಚುವರಿ 29,250 ಬಾಟಲುಗಳನ್ನುಈಗಾಗಲೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಸದಾನಂದ ಗೌಡ ಅವರು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಮೇ 24 ರಂದು ಆಂಫೊಟೆರಿಸಿನ್-ಬಿ ಯ ಹೆಚ್ಚುವರಿ 19,420 ಬಾಟಲುಗಳನ್ನು ಹಂಚಿಕೆ ಮಾಡಲಾಗಿದ್ದು, ಮೇ 21 ರಂದು ದೇಶಾದ್ಯಂತ ಔಷಧದ 23,680 ಬಾಟಲುಗಳನ್ನು ಸರಬರಾಜು ಮಾಡಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.