ನವದೆಹಲಿ: 15 ರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಮತ್ತು ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಅನುಮತಿಸಿದ್ದು, ಇದೀಗ ಲಸಿಕೆ ಪಡೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲು ಉದ್ದೇಶಿಸಲಾಗಿದೆ. ಆರೋಗ್ಯ ರಕ್ಷಾ ಸಿಬ್ಬಂದಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುವುದು. ಇದು 2 ನೇ ಡೋಸ್ ಪಡೆದ 90 ದಿನಗಳ ಬಳಿಕವಷ್ಟೇ ನೀಡಲಾಗುವುದು.
ಇದಲ್ಲದೇ, 60 ವರ್ಷ ಮತ್ತು ಅದಕ್ಕಿಂತಲೂ ಮೇಲ್ಪಟ್ಟ ನಾಗರಿಕರಿಗೂ ಬೂಸ್ಟರ್ ಡೋಸ್ ಸಿಗಲಿದೆ. ಇದು ಕೂಡ 2 ನೇ ಡೋಸ್ ಪಡೆದು 90 ದಿನಗಳಾಗಿರಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಬೂಸ್ಟರ್ ಡೋಸ್ ಪಡೆಯಲು ಬಯಸುವ ಆರೋಗ್ಯ ಕಾರ್ಯಕರ್ತರು ಮತ್ತು ನಾಗರಿಕರು ಕೋವಿನ್ ತಂತ್ರಾಂಶದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. 2 ನೇ ಡೋಸ್ ಪಡೆದು 90 ದಿನಗಳಾಗಿರದಿದ್ದರೆ ಅಂತಹವರು ಬೂಸ್ಟರ್ ಡೋಸ್ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಸೂಚಿಸಲಾಗಿದೆ.
15 ವರ್ಷ ಮೇಲ್ಪಟ್ಟವರು, 2007 ರಲ್ಲಿ ಅಥವಾ ಅದಕ್ಕಿಂತಲೂ ಮುಂಚೆ ಜನಿಸಿದವರು ಕೋವಿನ್ನಲ್ಲಿ ತಮ್ಮ ಹೆಸರನ್ನು ಸೂಕ್ತ ಸಂಪರ್ಕ ಸಂಖ್ಯೆ(ಮೊಬೈಲ್ ನಂಬರ್) ನೀಡಿ ನೋಂದಾಯಿಸಿಕೊಳ್ಳಬೇಕು. ಈ ವಯಸ್ಸಿವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುತ್ತಿದೆ. ಇವರನ್ನು ತುರ್ತು ಬಳಕೆದಾರರ ಪಟ್ಟಿಯಲ್ಲಿ(ಇಯುಎಲ್) ಪರಿಗಣಿಸಿ ಲಸಿಕೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.