ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾಗೂ ಓಮಿಕ್ರಾನ್ ಹಾವಳಿ ಹೆಚ್ಚುತ್ತಿರುವುದನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಫೆಬ್ರವರಿ 28ರವರೆಗೆ ಕೋವಿಡ್ ನಿರ್ಬಂಧ ವಿಸ್ತರಣೆ ಮಾಡಿದ್ದು, ಇಂದು ಮಹತ್ವದ ಆದೇಶ ಹೊರಹಾಕಿದೆ.
ಕೇಂದ್ರ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಕೋವಿಡ್ ನಿರ್ಬಂಧ ಜನವರಿ 31ಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ, ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಹೀಗಾಗಿ ಮತ್ತೊಂದು ತಿಂಗಳ ಕಾಲ ಮಾರ್ಗಸೂಚಿಗಳು ವಿಸ್ತರಣೆಯಾಗಲಿವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದ್ದು, ಕೊರೊನಾ ಹಾಗೂ ಓಮಿಕ್ರಾನ್ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.
ಇದನ್ನೂ ಓದಿರಿ: ದಿಢೀರ್ ಕುಸಿದ ಕಟ್ಟಡ.. ಇಬ್ಬರು ಬಾಲಕರು ದುರ್ಮರಣ
ದೇಶದ 407 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಈಗಲೂ ಶೇ. 10ಕ್ಕಿಂತಲೂ ಅಧಿಕವಾಗಿದ್ದು, ಇಂತಹ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡುವಂತೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಆದೇಶಿಸಿದ್ದಾರೆ.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ಕೋವಿಡ್ ನಿಯಂತ್ರಣಕ್ಕೆ ಕಂಟೈನ್ಮೆಂಟ್ ಝೋನ್, ರಾತ್ರಿ ವೇಳೆ ಕರ್ಫ್ಯೂ ವಿಧಿಸುವಂತಹ ನಿರ್ಬಂಧ ಮುಂದುವರೆಯಲಿದ್ದು, ರಾಜ್ಯ ಸರ್ಕಾರ ಭಯಸಿದರೆ ಲಾಕ್ಡೌನ್ ವಿಧಿಸಲು ಅನುಮತಿ ನೀಡಿದೆ. ದೇಶದಲ್ಲಿ ಟೆಸ್ಟ್ ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮುಂದುವರೆಸುವಂತೆ ತಿಳಿಸಿದೆ.
ರಾಜ್ಯ ಸರ್ಕಾರಗಳು ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ. ದೇಶದಲ್ಲಿ ಹೊಸ ರೂಪಾಂತರ ಓಮಿಕ್ರಾನ್ ಹಾವಳಿ ಕೂಡ ಹೆಚ್ಚಾಗಿದ್ದು, ದೇಶದಲ್ಲಿ ಸದ್ಯ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 22 ಲಕ್ಷಕ್ಕೂ ಅಧಿಕವಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ