ನವದೆಹಲಿ: ಮೂರು ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಭಾರತ್ ಬಯೋಟೆಕ್ ಜೊತೆ ಕೊವ್ಯಾಕ್ಸಿನ್ ಉತ್ಪಾದನೆಗೆ ಕೇಂದ್ರ ಸರ್ಕಾರ 150 ಕೋಟಿ ರೂ. ಮೀಸಲಿಟ್ಟಿದೆ.
ಕೋವ್ಯಾಕ್ಸಿನ್ 19 ರ ರಾಷ್ಟ್ರೀಯ ಕಾರ್ಯಪಡೆಯ ಅಧ್ಯಕ್ಷ ಮತ್ತು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ಅವರು ಶನಿವಾರ ಕೋವ್ಯಾಕ್ಸಿನ್ ಉತ್ಪಾದನೆಗೆ ಕೇಂದ್ರ ಸರ್ಕಾರ, ಭಾರತ್ ಬಯೋಟೆಕ್ ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಜೊತೆ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿದರು. ಸಾರ್ವಜನಿಕ ವಲಯದ ಕಂಪನಿಗಳೊಂದಿಗಿನ ಒಪ್ಪಂದವು ಕೊವ್ಯಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಡಾ ಪಾಲ್ ಹೇಳಿದರು.
ಸಾರ್ವಜನಿಕ ವಲಯದ ಕಂಪನಿಗಳಾದ ಹಾಫ್ಕೈನ್ ಬಯೋ ಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ (ಮುಂಬೈ) ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್) (ಹೈದರಾಬಾದ್) ಮತ್ತು ಭಾರತ್ ಇಮ್ಯುನೊಲಾಜಿಕಲ್ಸ್ ಅಂಡ್ ಬಯೋಲಾಜಿಕಲ್ಸ್ ಲಿಮಿಟೆಡ್, (ಬುಲಂದ್‌ಶಹರ್)ಗಳೊಂದಿಗೆ ಕೇಂದ್ರ ಒಪ್ಪಂದ ಮಾಡಿಕೊಂಡಿದೆ.
ಕೋವ್ಯಾಕ್ಸಿನ್ ಉತ್ಪಾದನೆಯು ಮುಂದಿನ ದಿನಗಳಲ್ಲಿ ತಿಂಗಳಿಗೆ 10 ಕೋಟಿಗಿಂತ ಹೆಚ್ಚು ಆಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಡಾ ಪಾಲ್ ಹೇಳಿದರು. ಈ ಮೊದಲು ಕೋವ್ಯಾಕ್ಸಿನ್ ಉತ್ಪಾದನೆಯು ತಿಂಗಳಿಗೆ 1 ಕೋಟಿ ಆಗಿತ್ತು. ಕೋವ್ಯಾಕ್ಸಿನ್ ಉತ್ಪಾದಿಸಲು ಅಗತ್ಯವಿರುವ ಹೆಚ್ಚಿನ ಲಸಿಕೆ ತಯಾರಕರೊಂದಿಗೆ ಅತ್ಯಾಧುನಿಕ ಪ್ರಯೋಗಾಲಯಗಳ ಕೊರತೆ ಇದೆ ಎಂದು ಇದೇ ವೇಳೆ ಅವರು ಹೇಳಿದರು.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಪಂಜಾಬ್, ಅಸ್ಸೋಂ, ಹಿಮಾಚಲ ಪ್ರದೇಶ ಮತ್ತು ಪುದುಚೇರಿ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ರು. ಪ್ರಸ್ತುತ ಮಹಾರಾಷ್ಟ್ರ, ದೆಹಲಿ, ಗುಜರಾತ್, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ದೈನಂದಿನ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ.