ನವದೆಹಲಿ: ಈ ಬಾರಿಯ ಚಳಿಗಾಲದ ಅಧಿವೇಶದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲದ ವೇಳೆ ಅನುಚಿತವಾಗಿ ವರ್ತಿಸಿದ್ದ 12 ಮಂದಿ ರಾಜ್ಯಸಭೆ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಅವರ ಅಮಾನತು ಆದೇಶವನ್ನು ಇನ್ನೂ ಹಿಂಪಡೆದಿಲ್ಲ. ಈ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಇಂದು ಪ್ರತಿಪಕ್ಷಗಳ ಸಭೆ ಕರೆದಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯಸಭೆಯಿಂದ ಅಮಾನತುಗೊಳಿಸಿರುವ ಕಾಂಗ್ರೆಸ್, ಟಿಎಂಸಿ, ಶಿವಸೇನೆ, ಸಿಪಿಐ(ಎಂ) ಮತ್ತು ಸಿಪಿಐ ಪಕ್ಷದ ಸಂಸದರಿಗೆ ಪತ್ರ ಬರೆದಿದ್ದಾರೆ. ಸೋಮವಾರ ಬೆಳಗ್ಗೆ (ಇಂದು) 10 ಗಂಟೆಗೆ ಸಂಸತ್ತಿನಲ್ಲಿ ನಡೆಯಲಿರುವ ಸಭೆಗೆ ಹಾಜರಾಗಿ ಎಂದು ಮನವಿ ಮಾಡಿದ್ದಾರೆ.
ಸಂಸದರ ಅಮಾನತು ವಿಷಯವೇ ರಾಜ್ಯಸಭೆಯ ಅಧಿವೇಶನದಲ್ಲಿ ದೊಡ್ಡದಾಗುತ್ತಿದೆ. ಅವರ ಅಮಾನತು ಹಿಂಪಡೆಯಬೇಕು ಎಂದು ಪ್ರತಿಪಕ್ಷಗಳ ನಾಯಕರು ಆಗ್ರಹ ಮಾಡುತ್ತಿದ್ದಾರೆ. ಅಮಾನತಿನ ನಂತರ ಎಲ್ಲಾ 12 ಸಂಸದರು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಪ್ರತಿನಿತ್ಯ ಧರಣಿ ನಡೆಸುತ್ತಿದ್ದಾರೆ. ಕೂಗಾಟ, ಗದ್ದಲಗಳ ಕಾರಣಕ್ಕೆ ಪದೇ ಪದೆ ಕಲಾಪ ಮುಂದೂಡುವ ಪರಿಸ್ಥಿತಿ ಎದುರಾಗುತ್ತಿದ್ದು, ಹೀಗಾಗಿ ಚೇರ್ಮನ್ ವೆಂಕಯ್ಯ ನಾಯ್ಡು, ಅಮಾನತುಗೊಂಡ 12 ಸದಸ್ಯರ ವಿಚಾರಕ್ಕೆ ಸಂಬಂಧಪಟ್ಟಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಶೀಘ್ರವೇ ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 23 ರಂದು ಮುಕ್ತಾಯಗೊಳ್ಳಲಿದೆ.