ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುನುಗೋಡಿನ ಅಭಿವೃದ್ಧಿಗೆ ಮೋದಿ ಸರ್ಕಾರ ಬದ್ಧವಾಗಿರುತ್ತದೆ. ರಾಜಗೋಪಾಲ್ ರೆಡ್ಡಿ ಬಿಜೆಪಿ ಸೇರುತ್ತಾರೆ ಎಂದರೆ ಒಬ್ಬ ನಾಯಕ ಸೇರುತ್ತಾರೆ ಎಂದರ್ಥವಲ್ಲ. ಇದು ಕೆಸಿಆರ್ ಸರ್ಕಾರವನ್ನು ಉರುಳಿಸುವ ಆರಂಭ. ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ಒತ್ತಿ ಹೇಳಿದರು.
ಚುನಾವಣೆಯಲ್ಲಿ ಟಿಆರ್‌ಎಸ್‌ಗೆ ಮತ ಹಾಕಿದರೆ ಕೆಸಿಆರ್ ಆಗಲಿ, ಕೆಟಿಆರ್ ಆಗಲಿ ಸಿಎಂ ಆಗುತ್ತಾರೆ. ಆದರೆ ದಲಿತ ಮುಖ್ಯಮಂತ್ರಿ ಸಿಎಂ ಆಗುವುದಿಲ್ಲ. ಕೆಸಿಆರ್ ಅವರ ಮಗ, ಮಗಳು ಮತ್ತು ಅಳಿಯ ಅಧಿಕಾರದಲ್ಲಿದ್ದರೆ, ಬಿಜೆಪಿಗೆ ಯಾವುದೇ ತೊಂದರೆ ಇಲ್ಲ. ಆದರೆ ಅವರ ಕುಟುಂಬ ಆಡಳಿತದಿಂದ ಜನರು ಏಕೆ ಕಷ್ಟಪಡಬೇಕು?. ಹಾಗಾಗಿ ಮುನುಗೋಡಿನಲ್ಲಿ ರಾಜಗೋಪಾಲ್ ರೆಡ್ಡಿ ಅವರನ್ನು ಗೆಲ್ಲಿಸಿ ಎಂದು ಅಮಿತ್ ಶಾ ಜನರಿಗೆ ಕರೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ, ಮೋದಿ ನೇತೃತ್ವದಲ್ಲಿ ತೆಲಂಗಾಣ ಜನರ ಎಲ್ಲ ಆಶೋತ್ತರಗಳನ್ನು ಈಡೇರಿಸಲಾಗುವುದು. ಕೆಸಿಆರ್ ರೈತರಿಗೆ ಮೋಸ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಪ್ರಧಾನಿ ಬೆಳೆ ವಿಮೆ ಜಾರಿಯಾಗದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಳೇಶ್ವರಂ ಯೋಜನೆ ಕೆಸಿಆರ್ ಕುಟುಂಬಕ್ಕೆ ಎಟಿಎಂ. ಎಲ್ಲಾ ರಾಜ್ಯಗಳು ಎರಡು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದರೆ, ಕೆಸಿಆರ್ ಮಾತ್ರ ಕಡಿಮೆ ಮಾಡಿಲ್ಲ ಎಂದು ಅಮಿತ್ ಶಾ ಹರಿಹಾಯ್ದರು.
ಉಪ ಚುನಾವಣೆ ಎದುರಿಸುತ್ತಿರುವ ಮುನುಗೋಡು ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ತೆಲಂಗಾಣಕ್ಕೆ ಕೇಂದ್ರವು ಹಣ ಮಂಜೂರು ಮಾಡುತ್ತಿಲ್ಲ. ರಾಜ್ಯಕ್ಕೆ ಕೃಷ್ಣಾ ನದಿ ನೀರು ಹಂಚಿಕೆ ಮಾಡುವ ಬಗ್ಗೆ ಕೇಂದ್ರ ಏಕೆ ಇನ್ನೂ ನಿರ್ಧರಿಸಿಲ್ಲ ಎಂಬುದಕ್ಕೆ ಅಮಿತ್ ಶಾ ಉತ್ತರ ನೀಡಬೇಕು ಎಂದು ಕೆಸಿಆರ್ ಪ್ರಶ್ನಿಸಿದ್ದರು.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಜೂನಿಯರ್ ಎನ್‌ಟಿಆರ್ ಭೇಟಿಯಾಗಲಿರುವ ಅಮಿತ್ ಶಾ
ಮುನುಗೋಡು ವಿಧಾನಸಭಾ ಉಪಚುನಾವಣೆಯನ್ನು ಟಿಆರ್‌ಎಸ್ ಮತ್ತು ಬಿಜೆಪಿ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿವೆ. ಕಾಂಗ್ರೆಸ್ ಸ್ಥಾನವನ್ನು ಉಳಿಸಿಕೊಳ್ಳಲು ನೋಡಿದ್ರೆ, ಬಿಜೆಪಿ ಗೆಲ್ಲುವ ಮೂಲಕ ಟಿಆರ್‌ಎಸ್‌ಗೆ ಪ್ರತಿಸ್ಪರ್ಧಿ ಎಂಬುದನ್ನು ಸಾಬೀತುಪಡಿಸಲು ಮುಂದಾಗಿದೆ. ರಾಜ್‌ಗೋಪಾಲ್ ರೆಡ್ಡಿ ಅವರು ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮೂಲಗಳ ಪ್ರಕಾರ, ರಾಜ್ ಗೋಪಾಲ್ ರೆಡ್ಡಿ, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಮತ್ತು ಟಿಆರ್‌ಎಸ್ ಇನ್ನೂ ತಮ್ಮ ಅಭ್ಯರ್ಥಿಗಳನ್ನು ನಿರ್ಧರಿಸಿಲ್ಲ.
2018 ರ ವಿಧಾನಸಭಾ ಚುನಾವಣಾ ಅಂಕಿಅಂಶಗಳ ಪ್ರಕಾರ, ಮುನುಗೋಡು 2,17,791 ಮತದಾರರನ್ನು ಹೊಂದಿದೆ. ರಾಜಗೋಪಾಲ್ ರೆಡ್ಡಿ ಅವರು 97,239 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿಆರ್‌ಎಸ್‌ನ ಕೆ ಪ್ರಭಾಕರ್ ರೆಡ್ಡಿ ಅವರನ್ನು 22,552 ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿ ಅಭ್ಯರ್ಥಿ ಜಿ ಮನೋಹರ್ ರೆಡ್ಡಿ 12,725 ಮತವನ್ನು ಗಳಿಸಿದ್ದರು.