ಮುಂಬೈ: ಕ್ರೂಸ್ ಶಿಪ್ ಡ್ರಗ್ಸ್ ಕೇಸ್ನಲ್ಲಿ ಮಹತ್ತರ ಸುಳಿವೊಂದು ಪೊಲೀಸರಿಗೆ ಲಭಿಸಿದ್ದು, ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪ ಬೆನ್ನಲ್ಲೇ ಸಿಸಿಟಿವಿ ದೃಶ್ಯಾವಳಿಯನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಸಿಟಿವಿಯಲ್ಲಿ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ, ಸ್ಯಾಮ್ ಡಿಸೋಜಾ ಮಾತುಕತೆ ನಡೆಸಿದ್ದಾರೆ ಎನ್ನಲಾದ ದೃಶ್ಯ ಪತ್ತೆಯಾಗಿದ್ದು, ಎಸ್ಐಟಿ ತನಿಖೆ ಮುಂದುವರೆಸಿದೆ. ಇದಕ್ಕೂ ಮೊದಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದ ಸ್ವತಂತ್ರ ಸಾಕ್ಷಿ, ಬಾಡಿಗಾರ್ಡ್ ಪ್ರಭಾಕರ್ ರಘೋಜಿ ಸೈಲ್, NCB ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರರು ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲು ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರಿಂದ 25 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದರು.
ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ಮಾಡಿ ಆರ್ಯನ್ ಖಾನ್ನನ್ನು ಕರೆದೊಯ್ದ ಕೆಲವೇ ಸಮಯದ ಬಳಿಕ, ಗೋಸಾವಿ, ದದ್ಲಾನಿ ಮತ್ತು ಉದ್ಯಮಿ ಎಂದು ಹೇಳಿಕೊಳ್ಳುವ ಸ್ಯಾಮ್ ಡಿಸೋಜಾ ಅವರು ಅಕ್ಟೋಬರ್ 3 ರಂದು ಲೋವರ್ ಪರೇಲ್‌ನಲ್ಲಿ ಭೇಟಿಯಾದರು ಎಂದು ಬಾಡಿಗಾರ್ಡ್ ಸೈಲ್ ಉಲ್ಲೇಖಿಸಿದ್ದರು. ಅಲ್ಲದೆ ಈ ವೇಳೆ ಎನ್‌ಸಿಬಿ ತನಿಖಾಧಿಕಾರಿ ವಾಂಖೆಡೆಗೂ ಹಣ ಪಾವತಿಸಬೇಕು ಎಂದು ಆರೋಪಿಸಲಾಗಿತ್ತು.
ಇಲ್ಲಿನ ಲೋವರ್ ಪ್ಯಾರೆಲ್ ರಸ್ತೆಯ ಬಿಗ್ಬಜಾರ್ ಬಳಿಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಎಸ್ಐಟಿ ತಂಡಕ್ಕೆ ಗೋಸಾವಿ, ದದ್ಲಾನಿ ಹಾಗೂ ಡಿಸೋಜ ನಡುವಿನ ಮಾತುಕತೆಯ ವಿಡಿಯೋ ಲಭ್ಯವಾಗಿದೆ ಎಂದು ಹೇಳಲಾಗ್ತಿದೆ.