ವಿಶಾಖಪಟ್ಟಣಂ(ಆಂಧ್ರಪ್ರದೇಶ): ವಿಶಾಖಪಟ್ಟಣಂ ಸಿಸಿಆರ್‌ಬಿಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಅಪ್ಪಲರಾಜು ಎಂಬಾತ ನಾಲ್ವರು ಮಹಿಳೆಯರೊಂದಿಗೆ ಮದುವೆಯಾಗಿ ಮೋಸ ಮಾಡಿದ್ದ ಎನ್ನಲಾಗ್ತಿದೆ. ಇದೀಗ ಐದನೇಯದಕ್ಕೆ ಸಿದ್ಧನಾಗ್ತಿದ್ದಾಗ ಸಿಕ್ಕಿಬಿದ್ದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಈಗಾಗಲೇ ನಾಲ್ವರು ಮಹಿಳೆಯರೊಂದಿಗೆ ಮದುವೆ ಮಾಡಿಕೊಂಡು ವಂಚಿಸಿರುವ ಆರೋಪಿ ಅಪ್ಪಲರಾಜು ಐದನೇ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದ. ಈ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಮೊದಲನೇ ಹೆಂಡತಿ ಪದ್ಮಾ, ದಿಶಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ತನಗೆ ಆಗಿರುವ ಅನ್ಯಾಯದ ಬಗ್ಗೆ ಮಾದ್ಯಮಗೋಷ್ಟಿ ನಡೆಸಿ, ಮಾಹಿತಿ ಬಹಿರಂಗಪಡಿಸಿದ್ದಾರೆ.
ಐದನೇ ಮದುವೆ ಮಾಡಿಕೊಳ್ಳುತ್ತಿರುವ ವಿಷಯ ಪದ್ಮಾಗೆ ಗೊತ್ತಾಗುತ್ತಿದ್ದಂತೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಆಕೆಯ ಮೇಲೆ ಅಪ್ಪಲರಾಜು ಹಲ್ಲೆ ಸಹ ನಡೆಸಿದ್ದಾಗಿ ತಿಳಿದು ಬಂದಿದೆ. ಇದರಿಂದ ಆಕ್ರೋಶಕ್ಕೊಳಗಾಗಿದ್ದ ಮೊದಲನೇಯ ಪತ್ನಿ, ದೂರು ನೀಡಿದ್ದಾಳೆ.
ಮಾಧ್ಯಮಗೋಷ್ಟಿ ವೇಳೆ ತನಗೆ ನಾಲ್ಕು ಸಲ ಗರ್ಭಪಾತವಾಗಿದೆ ಎಂದು ಪದ್ಮಾ ಕಣ್ಣೀರು ಹಾಕಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಅಪ್ಪಲರಾಜು ಅವರನ್ನ ಕರ್ತವ್ಯದಿಂದ ವಜಾಗೊಳಿಸಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.