ಕೋಲ್ಕತಾ (ಪಶ್ಚಿಮಬಂಗಾಳ): ಸಿಬಿಐ ನಿರ್ದೇಶನಾಲಯವು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ. ಚುನಾವಣೋತ್ತರ ಹಿಂಸಾಚಾರದ ವೇಳೆ ವರದಿಯಾದ ಕೊಲೆ, ಅತ್ಯಾಚಾರಗಳು ಮತ್ತು ಕೊಲೆ ಯತ್ನಗಳ ವಿವರಗಳನ್ನು ನೀಡುವಂತೆ ಕೋರಿದೆ. ಈ ಕುರಿತ ಮಾಹಿತಿ ಬಂದ ಕೂಡಲೇ ಸಿಬಿಐ ತನಿಖೆ ಆರಂಭಿಸಲಿದೆ.
ಕೋಲ್ಕತಾ ಹೈಕೋರ್ಟ್ ನಿನ್ನೆಯಷ್ಟೇ ಚುನಾವಣೋತ್ತರ ಹಿಂಸಾಚಾರದ ಸಮಯದಲ್ಲಿ ನಡೆದ ಅಪರಾಧಗಳ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಪ್ರಕರಣದ ತನಿಖೆಗಾಗಿ ಸಿಬಿಐ, 25 ಜನರ ನಾಲ್ಕು ತಂಡಗಳನ್ನು ರಚಿಸಿದೆ.
ಪ್ರತಿ ತಂಡವು ಆರು ಐಪಿಎಸ್ ಅಧಿಕಾರಿಗಳನ್ನೊಳಗೊಂಡಿದ್ದು, ಸಿಬಿಐ ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಗಳು ಈ ತಂಡದ ನೇತೃತ್ವವಹಿಸಿಕೊಳ್ಳುತ್ತಾರೆ. ಪ್ರತಿ ತಂಡವು ಉಪ ನಿರೀಕ್ಷಕರ ಸಾಮಾನ್ಯ ಶ್ರೇಣಿಯ ಇಬ್ಬರು ಅಧಿಕಾರಿಗಳನ್ನು ಮತ್ತು ಮೇಲ್ವಿಚಾರಕರ ಶ್ರೇಣಿಯಲ್ಲಿ ಮೂವರು ಅಧಿಕಾರಿಗಳನ್ನು ಹೊಂದಿರುತ್ತದೆ. ಸಿಬಿಐನ ಜಂಟಿ ನಿರ್ದೇಶಕ ಪಂಕಜ್ ಶ್ರೀವಾಸ್ತವ, ಎಲ್ಲಾ ನಾಲ್ಕು ತಂಡಗಳೊಂದಿಗೆ ಸಮನ್ವಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಚುನಾವಣೋತ್ತರ ಹಿಂಸಾಚಾರ..ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್
ದೆಹಲಿ ಮತ್ತು ಡೆಹ್ರಾಡೂನ್ನ ಸಿಬಿಐ ಅಧಿಕಾರಿಗಳನ್ನು ತಂಡದಲ್ಲಿ ನೇಮಿಸಲಾಗಿದೆ. ಪ್ರಸ್ತುತ ಭಾರತದ ವಿವಿಧ ನಗರಗಳಲ್ಲಿ ಹರಡಿರುವ ನಾಲ್ಕು ತಂಡಗಳ ಎಲ್ಲ ಅಧಿಕಾರಿಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ಕೋಲ್ಕತಾಗೆ ಕರೆಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.