ಕೋಲ್ಕತ್ತಾ: ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಭದ್ರತಾ ನಿರ್ದೇಶಕ ಜ್ಞಾನವಂತ್ ಸಿಂಗ್ ಅವರಿಗೆ ಮೇ 4 ರಂದು ಕೋಲ್ಕತಾ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದ ಚುನಾವಣಾ ಪ್ರಚಾರದ ವೇಳೆ ಗಾಯಗೊಂಡ ಬಳಿಕ ಅವರ ಭದ್ರತಾ ನಿರ್ದೇಶಕರಾಗಿದ್ದ ವಿವೇಕ್ ಸಹಾಯ್ ಅವರನ್ನು ಚುನಾವಣಾ ಆಯೋಗ ಸೇವೆಯಿಂದ ವಜಾ ಮಾಡಿತ್ತು. ಇವರ ಜಾಗಕ್ಕೆ ಐಪಿಎಸ್ ಅಧಿಕಾರಿ ಜ್ಞಾನವಂತ್ ಸಿಂಗ್ ಅವರನ್ನ ನೇಮಿಸಲಾಗಿತ್ತು.
ಮಮತಾ ಬ್ಯಾನರ್ಜಿಗೆ ಆಪ್ತರಾಗಿದ್ದ ಇವರು, ಮೊದಲಿಗೆ ಹೆಚ್ಚುವರಿ ಮಹಾನಿರ್ದೇಶಕ (ಭದ್ರತೆ)ರಾಗಿ ಸೇವೆಯಲ್ಲಿದ್ದರು. ಈ ಹಿಂದೆ ಕಲ್ಲಿದ್ದಲು ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜೀರಾ ಬ್ಯಾನರ್ಜಿ ಮತ್ತು ಅತ್ತಿಗೆ ಮಾನೆಕಾ ಗಂಭೀರ್ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಗಂಭೀರ್ ಅವರ ಪತಿ ಮತ್ತು ಅತ್ತೆಯನ್ನು ಏಜೆನ್ಸಿ ವಿಚಾರಣೆ ನಡೆಸಿದೆ.