ಡೆಹ್ರಾಡೂನ್ (ಉತ್ತರಾಖಂಡ): ಯೋಧರಿಗೆ ಆಹಾರ ಸಾಮಗ್ರಿ ಪೂರೈಕೆಯಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಸ್ ದಾಖಲಿಸಿಕೊಂಡಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಬಾರ್ಡರ್ ಗೇಟ್‌ನಲ್ಲಿ ನಿಯೋಜನೆಗೊಂಡಿದ್ದ ಅಂದಿನ ಕಮಾಂಡೆಂಟ್, ಇಬ್ಬರು ಇನ್ಸ್‌ಪೆಕ್ಟರ್‌ಗಳು ಮತ್ತು ಮೂವರು ಉದ್ಯಮಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಯೋಧರಿಗೆ ಸಾಮಗ್ರಿ ಪೂರೈಕೆಯಲ್ಲಿ ಸುಮಾರು 70 ಲಕ್ಷ ರೂ.ಗಳ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಗೃಹ ಸಚಿವಾಲಯದ ಅನುಮತಿ ಮೇರೆಗೆ ಈ ಹಿಂದೆ ಐಟಿಬಿಪಿ ಕಮಾಂಡೆಂಟ್ ಆಗಿದ್ದ ಅಶೋಕ್ ಕುಮಾರ್ ಗುಪ್ತಾ ಸೇರಿದಂತೆ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈ ಹಿಂದೆ ಚಮೋಲಿಯ ಅಂತಾರಾಷ್ಟ್ರೀಯ ಗಡಿಯಲ್ಲಿ ಸೀಮೆಎಣ್ಣೆ ಪೂರೈಕೆಯಲ್ಲಿ ಭಾರಿ ಅವ್ಯವಹಾರ ನಡೆಸಿದ ಆರೋಪ ಪ್ರಕರಣದಲ್ಲಿ ಕಮಾಂಡೆಂಟ್, ಇನ್ಸ್‌ಪೆಕ್ಟರ್ ಹಾಗೂ ಇತರರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು.
ಅಶೋಕ್ ಕುಮಾರ್ ಗುಪ್ತಾ ಡೆಹ್ರಾಡೂನ್‌ನ ಐಟಿಬಿಪಿಯ 23ನೇ ಬೆಟಾಲಿಯನ್‌ನಲ್ಲಿ ಕಮಾಂಡೆಂಟ್ ಆಗಿ ನಿಯೋಜನೆಗೊಂಡಿದ್ದರು. ಪ್ರಸ್ತುತ ಬಿಹಾರದಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ತಮ್ಮ ಪೋಸ್ಟಿಂಗ್ ಸಮಯದಲ್ಲಿ ಲಕ್ಷಾಂತರ ಮೌಲ್ಯದ ಹಗರಣವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 2017ರಿಂದ 2019ರ ನಡುವೆ ಸೈನಿಕರಿಗೆ ಮಾಂಸ, ಮೀನು, ಮೊಟ್ಟೆ, ಚೀಸ್, ಹಣ್ಣುಗಳು ಇತ್ಯಾದಿ ಸರಬರಾಜಿನಲ್ಲಿ ದೊಡ್ಡ ಹಗರಣ ಮಾಡಲಾಗಿದೆ. ಇಬ್ಬರು ಇನ್ಸ್‌ಪೆಕ್ಟರ್‌ಗಳು ಮತ್ತು ಸರಬರಾಜು ಮಾಡುವ ಮೂವರು ಉದ್ಯಮಿಗಳೊಂದಿಗೆ ಶಾಮೀಲಾಗಿ 70, 56,787 ರೂ. ಮೊತ್ತದ ಅವ್ಯವಹಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಆಂತರಿಕ ತನಿಖೆಯಲ್ಲಿ ಅವ್ಯವಹಾರ ಬಹಿರಂಗ: ಈ ಕುರಿತು ನಡೆದ ಆಂತರಿಕ ತನಿಖೆಯಲ್ಲಿ ಅವ್ಯವಹಾರ ಬಹಿರಂಗವಾದ ನಂತರ ನಾರ್ದರ್ನ್ ಫ್ರಾಂಟಿಯರ್ ಬಾರ್ಡರ್ನ ಐಜಿ ಪ್ರಕರಣದ ತನಿಖೆ ಗೃಹ ಸಚಿವಾಲಯದ ಅನುಮತಿ ಕೋರಿದ್ದರು. ಇದೀಗ ಪ್ರಕರಣ ದಾಖಲಿಸಿಕೊಳ್ಳಲು ಗೃಹ ಸಚಿವಾಲಯ ಸಿಬಿಐಗೆ ಅನುಮತಿ ನೀಡಿದೆ. ಇದಾದ ಬಳಿಕ ಹಾಲಿ ಕಮಾಂಡೆಂಟ್ ಪಿಯೂಷ್ ಪುಷ್ಕರ್ ಸಿಬಿಐಗೆ ದೂರು ಸಲ್ಲಿಸಿದ್ದರು. ಸಿಬಿಐ ಡೆಹ್ರಾಡೂನ್ ಶಾಖೆಯ ಎಸ್‌ಪಿ ಸತೀಶ್ ಕುಮಾರ್ ರಾಠಿ ಪ್ರಕರಣ ದಾಖಲಿಸಿಕೊಂಡು ಸಂಪೂರ್ಣ ಪ್ರಕರಣದ ತನಿಖೆಗಾಗಿ ಇನ್‌ಸ್ಪೆಕ್ಟರ್ ಶರದ್‌ಚಂದ್ ಗುಸೇನ್ ಅವರನ್ನು ನೇಮಿಸಿದ್ದಾರೆ.
ಯಾರೆಲ್ಲ ವಿರುದ್ಧ ಕೇಸ್?: ಇಲ್ಲಿನ ಕಮಾಂಡೆಂಟ್ ವಿರುದ್ಧ ಎರಡನೇ ಬಾರಿ ಭ್ರಷ್ಟಾಚಾರ ಪ್ರಕರಣ ದಾಖಲಾಗಿರುವುದು ಸಂಚಲನಕ್ಕೆ ಕಾರಣವಾಗಿದೆ. ಈಗ ಅದೇ ಕಮಾಂಡೆಂಟ್ ಅಶೋಕ್ ಕುಮಾರ್ ಗುಪ್ತಾ ಸಮೇತವಾಗಿ ಎಸ್‌ಐ ಸುಧೀರ್ ಕುಮಾರ್, ಎಎಸ್‌ಐ ಅನುಸೂಯಾ ಪ್ರಸಾದ್ ಮತ್ತು ಅಹುಜಾ ಟ್ರೇಡರ್ಸ್ನ ನರೇಂದ್ರ ಅಹುಜಾ, ಇಲ್ಲಿನ ಕೌಲಗರ್ ರಸ್ತೆ ನಿವಾಸಿ ನವೀನ್ ಕುಮಾರ್ ಹಾಗೂ ಇತರರ ವಿರುದ್ಧ ಭ್ರಷ್ಟಾಚಾರ ಕಾಯ್ದೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ತಿಂಗಳು ಚಮೋಲಿ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಠಾಣೆಯ ಸೀಮೆ ಎಣ್ಣೆ ಪೂರೈಕೆಯಲ್ಲಿ ನಡೆದ ದೊಡ್ಡ ಹಗರಣದಲ್ಲಿ ಕಮಾಂಡೆಂಟ್ ಅಶೋಕ್ ಕುಮಾರ್ ಗುಪ್ತಾ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಕುರಿತು ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ನಲ್ಲಿ ಆರೋಪಿ ಕಮಾಂಡೆಂಟ್ ಮತ್ತು ಗ್ಯಾಂಗ್ ನಕಲಿ ತೈಲ ಪೂರೈಕೆ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪವಿದೆ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಪಿಎಂ ಕಚೇರಿಯ ಅಧಿಕಾರಿ ಎಂದು ತಿರುಗಾಡುತ್ತಿದ್ದ ಕಾಶ್ಮೀರಿ ವ್ಯಕ್ತಿ ಬಂಧನ: ಉಗ್ರ ನಂಟಿನ ಗುಮಾನಿ