ನವದೆಹಲಿ: ಲಂಚ ಪಡೆದ ಗಂಭೀರ ಆರೋಪದಡಿ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಇಬ್ಬರು ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಗಳು, ಹಿರಿಯ ತಾಂತ್ರಿಕ ಸಹಾಯಕ ಮತ್ತು ಅಲೋಕ್ ಇಂಡಸ್ಟ್ರೀಸ್‌ನ ಸಹವರ್ತಿ ಸೇರಿದಂತೆ ಒಟ್ಟು ನಾಲ್ವರನ್ನು ಶನಿವಾರ ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ತನಿಖೆಯ ವೇಳೆ ಅಧಿಕಾರಿಗಳಿಂದ ಸುಮಾರು 59.80 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.
ನವದೆಹಲಿಯಲ್ಲಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಂಟಿ ನಿರ್ದೇಶಕ, ಹಿರಿಯ ತಾಂತ್ರಿಕ ಸಹಾಯಕ ಮತ್ತು ಲಿಕ್ವಿಡೇಟರ್ ಜಂಟಿ ನಿರ್ದೇಶಕ ಮತ್ತು ಅಲೋಕ್ ಇಂಡಸ್ಟ್ರೀಸ್ ಅಸೋಸಿಯೇಟ್ ಸೆರೆಸಿಕ್ಕಿದ್ದಾರೆ. ಜಂಟಿ ನಿರ್ದೇಶಕರಾದ ಮಂಜಿತ್ ಸಿಂಗ್ ಮತ್ತು ಪುನೀತ್ ದುಗ್ಗಲ್, ಹಿರಿಯ ತಾಂತ್ರಿಕ ಸಹಾಯಕ ರೂಹಿ ಅರೋರಾ ಮತ್ತು ಅಲೋಕ್ ಇಂಡಸ್ಟ್ರೀಸ್‌ನ ಸಹವರ್ತಿ ರೇಶಭ್ ರೈಜಾದಾ ಬಂಧಿತರು.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಕಾನುನುಬಾಹಿರ ಚಟುವಟಿಕೆ ಹಾಗು ಅಕ್ರಮ ವ್ಯಾಪಾರ ನಡೆಸುವ ಸಲುವಾಗಿ ಖಾಸಗಿ ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಸಿಬಿಐ ಬಲೆ ಬೀಸಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಲಂಚದ ಹಣದೊಂದಿಗೆ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇದರ ನಂತರ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಾದ ದೆಹಲಿ, ಗುರುಗ್ರಾಮ್, ಚೆನ್ನೈನಲ್ಲಿ ಪರಿಶೀಲನೆ ನಡೆಸಿದ್ದು, ಸುಮಾರು 59.80 ಲಕ್ಷ ರೂಪಾಯಿ ಮತ್ತು ಹಲವಾರು ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತರನ್ನು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಅಸ್ಸಾಂನಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳು ಸೆರೆ : ಅಸ್ಸಾಂನಲ್ಲಿ ಜುಲೈ 21ರಂದು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿತ್ತು. ಆರೋಪಿಗಳಿಂದ 2.32 ಕೋಟಿ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಧುಬ್ರಿ ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಬಿಸ್ವಜಿತ್ ಗೋಸ್ವಾಮಿ ಮತ್ತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮೃಣಾಲ್ ಕಾಂತಿ ಸರ್ಕಾರ್ ಬಂಧಿತ ಅಧಿಕಾರಿಗಳಾಗಿದ್ದರು.
ಧುಬ್ರಿಯ ಹೆಚ್ಚುವರಿ ಜಿಲ್ಲಾ ಕಾರ್ಯಕ್ರಮ ನಿರ್ವಾಹಕರಾದ ಮೃಣಾಲ್ ಕಾಂತಿ ಸರ್ಕಾರ್ ಲಂಚದ ಬೇಡಿಕೆಯ ಭಾಗವಾಗಿ 30,000 ರೂಪಾಯಿ ಸ್ವೀಕರಿಸುತ್ತಿದ್ದಾಗ ಸಿಇಒ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಬೆನ್ನಲ್ಲೇ ವಿಜಿಲೆನ್ಸ್ ಧುಬ್ರಿ ಜಿಲ್ಲಾ ಪರಿಷತ್ ಸಿಇಒ ಬಿಸ್ವಜಿತ್ ಗೋಸ್ವಾಮಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಧುಬ್ರಿ ಜಿಲ್ಲಾ ಪರಿಷತ್ ಸಿಇಒ ಬಿಸ್ವಜಿತ್ ಗೋಸ್ವಾಮಿ ಅವರ ಅಧಿಕೃತ ಮತ್ತು ಸ್ವಂತ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಬಿಸ್ವಜಿತ್ ಗೋಸ್ವಾಮಿ ಅವರ ಮನೆ ಶೋಧಿಸಿದಾಗ 2.32 ಕೋಟಿ ರೂಪಾಯಿ ನಗದು ಸಿಕ್ಕಿತ್ತು.
ಇದನ್ನೂ ಓದಿ: ಇಡಿಯಿಂದ ಉದ್ಯಮಿಗಳ 40 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಜಪ್ತಿ!