ನವದೆಹಲಿ: 2004ರಲ್ಲಿ ನಡೆದ ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳಾದ ಜಿ.ಎಲ್.ಸಿಂಘಾಲ್, ತರುಣ್ ಬರೋಟ್ ಹಾಗು ಅನಜು ಚೌಧರಿ ಅವರನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ.
ಸಿಬಿಐ ಸ್ಪೆಷಲ್ ಜಡ್ಜ್ ವಿ.ಆರ್.ರಾವಲ್ ಅವರು ಅಧಿಕಾರಿಗಳನ್ನು ಬಿಡುಗಡೆಗೊಳಿಸುವ ಅರ್ಜಿಗಳಿಗೆ ಒಪ್ಪಿಗೆ ನೀಡಿದ್ದಾರೆ. ಈ ಅಧಿಕಾರಿಗಳು ಮಾರ್ಚ್ 20ರಂದು ತಮ್ಮನ್ನು ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೂ ಮೊದಲು ಅಲಹಾಬಾದ್ ಹೈಕೋರ್ಟ್, ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರಷ್ಟೇ ಎಂದು ಹೇಳಿದ್ದು, ತನಿಖೆ ನಡೆಸುತ್ತಿದ್ದ ಸಿಬಿಐ ಮೇಲ್ಮನವಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ನ್ಯಾಯಾಲಯದ ತೀರ್ಪಿನ ನಂತರ ಸಿಬಿಐ ಅರ್ಜಿ ಸಲ್ಲಿಸದ ಕಾರಣದಿಂದ ಮೂವರು ಅಧಿಕಾರಿಗಳು ತಮ್ಮನ್ನು ಬಿಡುಗಡೆ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಪರಿಗಣಿಸಿದ ಸಿಬಿಐ ವಿಶೇಷ ಕೋರ್ಟ್, ಜಿ.ಎಲ್.ಸಿಂಘಾಲ್, ತರುಣ್ ಬರೋಟ್ ಹಾಗು ಅನಜು ಚೌಧರಿ ಅವರನ್ನು ಬಿಡುಗಡೆ ಮಾಡಿದೆ. ಈ ಅಧಿಕಾರಿಗಳಲ್ಲಿ ತರುಣ್ ಬರೋಟ್ ಈಗ ನಿವೃತ್ತರಾಗಿದ್ದಾರೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ ಪ್ರಕರಣ: ದೀಪ್ ಸಿಧು ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಮೂವರ ವಿರುದ್ಧವೂ ಕೊಲೆ, ಸಂಚು, ಅಪಹರಣ, ಮುಂಬೈಯಲ್ಲಿರುವ ಮುಂಬ್ರಾ ಮೂಲದ 19 ವರ್ಷದ ಯುವತಿ ಇಶ್ರತ್ ಜಹಾನ್ ಮತ್ತು ಆಕೆಯ ಸ್ನೇಹಿತರನ್ನು ಅನಧಿಕೃತವಾಗಿ ಬಂಧನದಲ್ಲಿರಿಸಿದ ಆರೋಪವಿತ್ತು.
ಈ ಅಧಿಕಾರಿಗಳು ಈ ಪ್ರಕರಣದ ಕೊನೆಯ ಅಧಿಕಾರಿಗಳಾಗಿದ್ದು, ಇದಕ್ಕೂ ಮೊದಲು ಏಳು ಮಂದಿ ಪೊಲೀಸ್ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ.
ಏನಿದು ಇಶ್ರತ್ ಜಹಾನ್ ಕೇಸ್..?
ಇಶ್ರತ್ ಜಹಾನ್, ಮುಂಬೈನ ಮುಂಬ್ರಾ ಮೂಲದ 19 ವರ್ಷದ ಯುವತಿಯಾಗಿದ್ದು, ಆಕೆ ಮತ್ತು ಆಕೆಯ ಸಹಚರರಾದ ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ, ಅಮ್ಜದ್ ಅಲಿ ಅಕ್ಬರ್ ಅಲಿ ರಾಣಾ ಮತ್ತು ಝೀಶನ್ ಜೋಹಾರ್ ಎಂಬುವವರನ್ನು 2004 ಜೂನ್ 15ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಎನ್ಕೌಂಟರ್ ಮಾಡಲಾಗಿತ್ತು.
ಎನ್ಕೌಂಟರ್ ಏಕೆ..? ಪೊಲೀಸರು ಹೇಳಿದ್ದೇನು..?
2004ರಲ್ಲಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ ಇವರನ್ನು ಎನ್ಕೌಂಟರ್ ಮಾಡಲಾಗಿದ್ದು, ಭಯೋತ್ಪಾದನಾ ಸಂಘಟನೆಗೆ ಸೇರಿದವರಾಗಿದ್ದಾರೆ ಅನ್ನೋದು ಪೊಲೀಸರ ವಾದವಾಗಿತ್ತು.
ಈ ಎನ್ಕೌಂಟರ್ ನಕಲಿ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿದ್ದು, ಈ ತಂಡವೂ ನಕಲಿ ಎನ್ಕೌಂಟರ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕಾರಣದಿಂದಾಗಿ ಸಿಬಿಐ ದೂರು ದಾಖಲು ಮಾಡಿಕೊಂಡಿತ್ತು.