ಬದೌನ್: ಕೆಲವೊಂದು ಘಟನೆಗಳು ಮನಸ್ಸನ್ನು ಕಲಕಿ ಬಿಡುತ್ತವೆ. ಕಣ್ಣೆದುರಿಗಿದ್ದ ವ್ಯಕ್ತಿ ಮುಂದಿನ ಕ್ಷಣದಲ್ಲಿ ಇರುವುದಿಲ್ಲ. ಇಂಥದ್ದೇ ಒಂದು ಘಟನೆ ಉತ್ತರಪ್ರದೇಶದ ಬದೌನ್ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಏನೂ ಅರಿಯದ ಪುಟ್ಟ ಕಂದಮ್ಮನನ್ನು ಬೆಕ್ಕೊಂದು ಎತ್ತಿಕೊಂಡು ಹೋಗಿ ಮನೆಯ ಮಹಡಿಯಿಂದ ಬಿಸಾಡಿದೆ. ಬಿದ್ದು ತೀವ್ರ ಗಾಯಗೊಂಡ ಹಸುಳೆ ಪ್ರಾಣ ಬಿಟ್ಟಿದೆ.
ಬದೌನ್ ಜಿಲ್ಲೆಯ ಉಸಾವನ್ ಪೊಲೀಸ್ ಠಾಣಾ ವ್ಯಾಪ್ತಿಯ ಗೌಂತರ ಪಟ್ಟಿ ಭೌನಿ ಎಂಬ ಗ್ರಾಮದಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ತಾಯಿಯೊಂದಿಗೆ ಮಲಗಿದ್ದ ಹೆಣ್ಣು ಮಗುವನ್ನು ಬೆಕ್ಕು ಬಾಯಿಯಲ್ಲಿ ಕಚ್ಚಿಕೊಂಡು ಹೋಗಿದೆ. ಮಹಡಿ ಮೇಲೆ ಮಗು ಅಳುವುದನ್ನು ಕೇಳಿಸಿಕೊಂಡು ಮನೆಯವರು ಗಲಾಟೆ ಮಾಡಿದ್ದು, ಈ ವೇಳೆ, ಬೆಕ್ಕು ಮಗುವನ್ನು ಬಿಟ್ಟು ಓಡಿ ಹೋಗಿದೆ. ಆಗ ಕಂದಮ್ಮ ಮಾಳಿಗೆಯಿಂದ ಅಂಗಳಕ್ಕೆ ಬಿದ್ದು ಸಾವನ್ನಪ್ಪಿದೆ. ಅಚಾನಕ್ಕಾಗಿ ನಡೆದ ಘಟನೆ ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸೋಮವಾರ ಬೆಳಗ್ಗೆ ಮಗುವಿನ ಶವವನ್ನು ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದರು.
ಘಟನೆ ಹೇಗಾಯ್ತು?: ಗ್ರಾಮದ ರೇಷ್ಮಾ ಎಂಬುವವರು 15 ದಿನಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದರಲ್ಲಿ ಒಂದು ಗಂಡು, ಹೆಣ್ಣಾಗಿತ್ತು. ಭಾನುವಾರ ರಾತ್ರಿ ಮನೆಯಲ್ಲಿ ಮಕ್ಕಳಿಬ್ಬರನ್ನು ಮಲಗಿಸಲಾಗಿತ್ತು. ಈ ವೇಳೆ, ಅಲ್ಲಿಗೆ ಇಲಿಯನ್ನು ಹುಡುಕಿಕೊಂಡು ಬಂದ ಬೆಕ್ಕು ಹೆಣ್ಣು ಮಗುವನ್ನು ಕಚ್ಚಿಕೊಂಡು ಹೋಗಿದೆ. ಈ ಸಮಯಕ್ಕೆ ತಾಯಿ ಅಲ್ಲಿರಲಿಲ್ಲ. ಹಸುಳೆಯನ್ನು ಬೆಕ್ಕು ಮಹಡಿಯ ಮೇಲೆ ಎತ್ತಿಕೊಂಡು ಹೋಗಿದೆ.
ಮಗುವಿನ ಅಳುವಿನ ಸದ್ದು ಕೇಳಿ ಬಂದು, ಮನೆಯೊಳಗೆ ನೋಡಿದಾಗ ಒಂದು ಮಗು ಕಾಣಿಸದ್ದು ಕಂಡು ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಹೊರಗೆ ಓಡಿ ಹೋಗಿ ನೋಡಿದಾಗ ಮಹಡಿಯ ತುದಿಯಲ್ಲಿ ಬೆಕ್ಕು ಕಚ್ಚಿಕೊಂಡು ನಿಂತಿರುವುದು ಕಂಡಿದೆ. ಕುಟುಂಬಸ್ಥರು ರಕ್ಷಣೆಗಾಗಿ ಬೆಕ್ಕು ಓಡಿಸಲು ಯತ್ನಿಸಿದಾಗ, ಮಗುವನ್ನು ಬಿಟ್ಟು ಓಡಿ ಹೋಗಿದೆ. ದುರಾದೃಷ್ಟವಶಾತ್ ಮಗು ಛಾವಣಿಯಿಂದ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ.
ಪ್ರಪಂಚವನ್ನೇ ಕಾಣದ ಮಗು ಜನಿಸಿದ 15 ದಿನದಲ್ಲೇ ಪ್ರಾಣ ಕಳೆದುಕೊಂಡಿದ್ದು, ಹೆತ್ತವರಿಗೆ ಸಂಕಟ ತಂದಿದೆ. ಈ ಘಟನೆಯಿಂದ ಕುಟುಂಬಸ್ಥರು ಆಘಾತಗೊಂಡಿದ್ದಲ್ಲದೇ, ಕಣ್ಣೀರಾಗಿದ್ದಾರೆ. ಸೋಮವಾರ ಬೆಳಗ್ಗೆ ಮಗುವಿನ ಅಂತ್ಯಸಂಸ್ಕಾರ ಮಾಡಲಾಗಿದೆ. ಸಂಬಂಧಿಕರು ಹೇಳುವ ಪ್ರಕಾರ, ಬೆಕ್ಕು ಕಳೆದ ಹಲವು ದಿನಗಳಿಂದ ಮನೆಯ ಸುತ್ತಲೂ ತಿರುಗಾಡುತ್ತಿತ್ತು. ಆದರೆ, ಮಗುವನ್ನು ಎತ್ತಿಕೊಂಡು ಹೋಗಿ ಅನಾಹುತ ಮಾಡುತ್ತದೆ ಎಂದು ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ರಸ್ತೆ ಬದಿಯಲ್ಲಿ ಸಿಕ್ಕ 2 ಸಾವಿರ ಮುಖ ಬೆಲೆಯ ಗರಿ ಗರಿ ನೋಟುಗಳು.. ಹತ್ತಿರ ಹೋಗಿ ನೋಡಿದಾಗ ಗೊತ್ತಾಯ್ತು ಅಸಲಿಯತ್ತು!