ಹೈದರಾಬಾದ್: ಕ್ಯಾಸಿನೊ ನಿರ್ವಾಹಕ ಪ್ರವೀಣ್ ತೋಟದ ಮನೆ ಮೃಗಾಲಯದ ಉದ್ಯಾನ ನೆನಪಿಸುತ್ತದೆ. ಇಡಿ ಅಧಿಕಾರಿಗಳ ದಾಳಿ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ರಂಗಾರೆಡ್ಡಿ ಜಿಲ್ಲೆಯ ಕಂದುಕೂರು ಮಂಡಲದ ಸಾಯಿರೆಡ್ಡಿಗುಡಾ ಬಳಿಯ 12 ಎಕರೆ ಪ್ರವೀಣ್ ಫಾರ್ಮ್ಹೌಸ್ನ್ನು ಪರಿಶೀಲನೆ ನಡೆಸಿದರು. ಈ ವೇಳೆ, ಆ ಫಾರ್ಮ್‌ಹೌಸ್ ಒಂದು ಚಿಕ್ಕ ಮೃಗಾಲಯದಂತೆ ಇರುವುದು ಕಂಡು ಬಂದಿದೆ.
ಈ ಫಾರ್ಮ್‌ಹೌಸ್‌ನಲ್ಲಿ ಇಗುವಾನಾಗಳು (ಉಡದ ಜಾತಿ), ವಿವಿಧ ರೀತಿಯ ಹಾವುಗಳು, ಆಡುಗಳು, ವಿವಿಧ ಜಾತಿಯ ನಾಯಿಗಳು, ಸ್ಕಂಕ್ಗಳು (ಅಳಿಲು ಜಾತಿ), ಮುಂಗುಸಿಗಳು, ಜೇಡಗಳು, ಬಾತುಕೋಳಿಗಳು, ಹಸುಗಳು, ಪಾರಿವಾಳಗಳು ಮತ್ತು ಹಲ್ಲಿಗಳು ಕಂಡುಬಂದಿವೆ. ಇವುಗಳೊಂದಿಗೆ ಪುರಾತನವಾದ ರಥ, ಜಟ್ಕಾ ಮತ್ತು ಹಿತ್ತಾಳೆಯಿಂದ ಮಾಡಿದ ಎರಡು ಸಿಂಹದ ವಿಗ್ರಹಗಳು ಸಹ ಇರುವುದು ತಿಳಿದು ಬಂದಿದೆ. ಮತ್ತೊಂದೆಡೆ ಪ್ರಾಥಮಿಕ ತಪಾಸಣೆ ವೇಳೆ ನಿಯಮಗಳಿಗೆ ವಿರುದ್ಧವಾಗಿ ಏನೂ ಪತ್ತೆಯಾಗಿಲ್ಲ ಎಂದು ಕಳ್ಳಬೇಟೆ ನಿಗ್ರಹ ದಳದ ರೇಂಜ್ ಆಫೀಸರ್ ಟಿ.ರಮೇಶ್ ಕುಮಾರ್ ತಿಳಿಸಿದ್ದಾರೆ.
![Casino organizer Praveen farmhouse is reminiscent of a zoo park Mini zoo park in Hyderbad ED notice to Casino organizer Praveen Hyderabad crime news ಹೈದರಾಬಾದ್ನಲ್ಲಿ ಮೃಗಾಲಯದಂತಿರುವ ಕ್ಯಾಸಿನೊ ನಿರ್ವಾಹಕನ ತೋಟದ ಮನೆ ಹೈದರಾಬಾದ್ನಲ್ಲಿ ಸಣ್ಣ ಮೃಗಾಲಯ ಪ್ರವೀಣ್ ಸೇರಿ ಐವರಿಗೆ ಇಡಿ ನೋಟಿಸ್ ಹೈದರಾಬಾದ್ ಅಪರಾಧ ಸುದ್ದಿ](https://etvbharatimages.akamaized.net/etvbharat/prod-images/15965806_sedsd.jpg)
ಪ್ರಾಣಿಗಳಿಗೆ ಹಾನಿಯಾದರೆ ಪ್ರಕರಣ: ಸಾಯಿ ರೆಡ್ಡಿಗೌಡ ಫಾರ್ಮ್‌ಹೌಸ್‌ನಲ್ಲಿ ಹೊರರಾಜ್ಯಗಳಿಗೆ ಸಂಬಂಧಿಸಿದ ಪಕ್ಷಿ, ಹಾವು, ಇತರ ಪ್ರಾಣಿಗಳನ್ನು ಖರೀದಿಸಿ ಸಾಕುತ್ತಿದ್ದು, ಅವುಗಳಿಗೆ ಹಾನಿ ಮಾಡಿರುವುದು ಕಂಡು ಬಂದರೆ ಅಥವಾ ಈ ಪ್ರಾಣಿಗಳೊಂದಿಗೆ ವ್ಯಾಪಾರ ನಡೆಸಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಕಂದುಕೂರು ಉಪ ಅರಣ್ಯಾಧಿಕಾರಿ ಹೇಮಾ ತಿಳಿಸಿದರು.
ಪ್ರಾಣಿಗಳೊಂದಿಗೆ ವ್ಯಾಪಾರ ಮಾಡುವುದಿಲ್ಲ: ನಾವು ಯಾವುದೇ ಪ್ರಾಣಿಗಳನ್ನು ವ್ಯಾಪಾರಕ್ಕಾಗಿ ಬಳಸುವುದಿಲ್ಲ, ಮಾರುವುದಿಲ್ಲ. ಪ್ರವೀಣ್ ಒಬ್ಬ ಪ್ರಾಣಿ ಪ್ರೇಮಿ. ಅವರು ಎಲ್ಲ ಅನುಮತಿಗಳೊಂದಿಗೆ ಅವುಗಳನ್ನು ಸಾಕುತ್ತಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಯಾವುದೇ ಪಾರ್ಟಿಗಳು ನಡೆಯುವುದಿಲ್ಲ ಎಂದು ತೋಟದ ಮನೆಯ ಮೇಲ್ವಿಚಾರಕ ಗಟ್ಟು ಮಾಧವರಾವ್ (ಚಿಕೋಟಿ ಪ್ರವೀಣ್ ಅವರ ಚಿಕ್ಕಪ್ಪ) ಹೇಳಿದರು.
ಪ್ರವೀಣ್ ಸೇರಿ ಐವರಿಗೆ ಇಡಿ ನೋಟಿಸ್: ಕ್ಯಾಸಿನೊ ನಿರ್ವಾಹಕ ಚಿಕೋಟಿ ಪ್ರವೀಣ್‌ನ ವ್ಯವಹಾರಗಳ ಕುರಿತು ಇಡಿ ತನಿಖೆ ಮುಂದುವರಿದಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಐವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕ್ಯಾಸಿನೊ ನಿರ್ವಾಹಕರಾದ ಪ್ರವೀಣ್ ಮತ್ತು ಮಾಧವ್ ರೆಡ್ಡಿ ಹಾಗೂ ಫ್ಲೈಟ್ ಆಪರೇಟರ್ ಸಂಪತ್ ಸೇರಿದಂತೆ ಇಬ್ಬರು ಹವಾಲಾ ಏಜೆಂಟ್‌ಗಳಿಗೆ ಇಡಿ ನೋಟಿಸ್ ನೀಡಿದೆ. ಸೋಮವಾರ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
![Casino organizer Praveen farmhouse is reminiscent of a zoo park Mini zoo park in Hyderbad ED notice to Casino organizer Praveen Hyderabad crime news ಹೈದರಾಬಾದ್ನಲ್ಲಿ ಮೃಗಾಲಯದಂತಿರುವ ಕ್ಯಾಸಿನೊ ನಿರ್ವಾಹಕನ ತೋಟದ ಮನೆ ಹೈದರಾಬಾದ್ನಲ್ಲಿ ಸಣ್ಣ ಮೃಗಾಲಯ ಪ್ರವೀಣ್ ಸೇರಿ ಐವರಿಗೆ ಇಡಿ ನೋಟಿಸ್ ಹೈದರಾಬಾದ್ ಅಪರಾಧ ಸುದ್ದಿ](https://etvbharatimages.akamaized.net/etvbharat/prod-images/15965806_animal.jpg)
ಪ್ರವೀಣ್ ಮತ್ತು ಮಾಧವರೆಡ್ಡಿ ಅವರ ಬ್ಯಾಂಕ್ ಖಾತೆಗಳಲ್ಲಿ ಸುಮಾರು 25 ಕೋಟಿ ರೂಪಾಯಿ ವಹಿವಾಟು ನಡೆದಿರುವುದನ್ನು ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪ್ರವೀಣ್ ಮತ್ತು ಮಾಧವರೆಡ್ಡಿ ಅವರ ಖಾತೆಯಿಂದ ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಹಣ ವರ್ಗಾವಣೆಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ವಹಿವಾಟಿನ ವಿವರಗಳ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಈ ವರ್ಷದಲ್ಲಿ ನಾಲ್ಕು ಬೃಹತ್ ಕ್ಯಾಸಿನೊ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಪ್ರವೀಣ್ ಮತ್ತು ಮಾಧವ್ ರೆಡ್ಡಿ ಗೋವಾ, ಶ್ರೀಲಂಕಾ, ನೇಪಾಳ ಮತ್ತು ಥೈಲ್ಯಾಂಡ್‌ನಲ್ಲಿ ಕ್ಯಾಸಿನೊ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇಲ್ಲಿಂದ ಹಣವನ್ನು ತೆಗೆದುಕೊಂಡು ಹೋಗಿ ಹವಾಲಾ ಮಾರ್ಗದಲ್ಲಿ ಇಲ್ಲಿಗೆ ತರಲಾಗಿದೆ ಎಂದು ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಇದಕ್ಕಾಗಿ ಬೇಗಂಬಜಾರ್ ಮತ್ತು ಜುಬಿಲಿ ಹಿಲ್ಸ್‌ನ ಇಬ್ಬರು ಹವಾಲಾ ಏಜೆಂಟ್‌ಗಳ ಸಹಾಯ ಪಡೆಯಲಾಗಿದೆ. ಫೆಮಾ ನಿಯಮಾವಳಿಗಳನ್ನು ಉಲ್ಲಂಘಿಸಿರುವುದರ ಬಗ್ಗೆ ಇಡಿ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.
ಓದಿ: ಸಿನಿ ತಾರೆಯರಿಗೆ ಹವಾಲಾ ಹಣ ಸಂದಾಯ ಶಂಕೆ: ಕ್ಯಾಸಿನೊ ಡೀಲರ್ಗಳ ಮೇಲೆ ಇಡಿ ದಾಳಿ