ಹೈದರಾಬಾದ್(ತೆಲಂಗಾಣ): ಅಕ್ಟೋಬರ್ 6ರಂದು ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಹೆಟೆರೊ ಡ್ರಗ್ಸ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ 142 ಕೋಟಿ ರೂಪಾಯಿ ನಗದು ಹಾಗೂ 550 ಕೋಟಿ ಲೆಕ್ಕವಿಲ್ಲದ ಆದಾಯ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಹೆಟೆರೊ ಡ್ರಗ್ಸ್ ಗ್ರೂಪ್(HETERO DRUGS GROUPS) ಹೈದರಾಬಾದ್ ಮೂಲದ ಪ್ರಮುಖ ಔಷಧ ಕಂಪನಿಯಾಗಿದ್ದು, ಹೆಚ್ಚಿನ ಉತ್ಪನ್ನಗಳನ್ನ ವಿದೇಶಗಳಿಗೆ ರಫ್ತು ಮಾಡುತ್ತದೆ. ಪ್ರಮುಖವಾಗಿ ಯುಎಸ್ಎ, ಯುರೋಪ್, ದುಬೈ ಹಾಗೂ ಇತರ ಆಫ್ರಿಕನ್ ದೇಶಗಳಿಗೆ ಔಷಧ ರವಾನೆ ಮಾಡುತ್ತದೆ.
ಅಕ್ಟೋಬರ್ 6ರಂದು ಆರು ರಾಜ್ಯಗಳ 50 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅನೇಕ ರಹಸ್ಯ ಖಾತೆಗಳ ಮಾಹಿತಿ ಲಭ್ಯವಾಗಿದ್ದು, ಪೆನ್ ಡ್ರೈವ್, ಇತರ ದಾಖಲೆ ಪತ್ತೆಯಾಗಿವೆ.
ಶೋಧದ ವೇಳೆ ನಕಲಿ ಹಾಗೂ ಅಸ್ತಿತ್ವದಲ್ಲಿಲ್ಲದ ಸಂಸ್ಥೆಗಳಿಂದ ಮಾಡಿದ ಖರೀದಿಗಳಲ್ಲಿನ ವ್ಯತ್ಯಾಸಗಳು ಮತ್ತು ಕೆಲವು ವೆಚ್ಚದ ಮಾಹಿತಿ ಪತ್ತೆಯಾಗಿವೆ. ಭೂಮಿ ಖರೀದಿಸಲು ಹಣ ಪಾವತಿ ಪುರಾವೆ ಲಭ್ಯವಾಗಿವೆ. ಸರ್ಕಾರಿ ನೋಂದಣಿ ಮೌಲ್ಯಕ್ಕಿಂತಲೂ ಕಡಿಮೆ ಹಣ ನೀಡಿರುವುದು ವರದಿಯಾಗಿದೆ. ಜೊತೆಗೆ ಅನೇಕ ಬ್ಯಾಂಕ್ ಲಾಕರ್, 142,87 ಕೋಟಿ ರೂ. ನಗದು ಹಾಗೂ 550 ಕೋಟಿ ರೂ. ಲೆಕ್ಕವಿಲ್ಲದ ಆದಾಯ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.