ಕೋಲ್ಕತಾ(ಪಶ್ಚಿಮ ಬಂಗಾಳ): ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ನಾಳೆ ಅಂತಿಮ ಅಥವಾ 8ನೇ ಸುತ್ತಿನ ಮತದಾನ ನಡೆಯಲಿದೆ. ಇದ್ರ ಬೆನ್ನಲ್ಲೇ ಚುನಾವಣಾ ಆಯೋಗದ ಸ್ಥಾಯಿ ವಿಚಕ್ಷಣಾ ತಂಡ (ಎಸ್ಎಸ್ಟಿ) 1.45 ಕೋಟಿ ರೂಪಾಯಿ ನಗದನ್ನು ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳಿಂದ ವಶಕ್ಕೆ ಪಡೆದಿದೆ. ಈ ಬಗ್ಗೆ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚೌರಂಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೌಲಾಲಿ ಬಳಿ 30 ಲಕ್ಷ ರೂಪಾಯಿ ಮತ್ತು ಜೊರಾಸಂಕೋ ವಿಧಾನಸಭಾ ಕ್ಷೇತ್ರದ ಪ್ರದೇಶವೊಂದರಲ್ಲಿ 40 ಲಕ್ಷ ರೂಪಾಯಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕೋಲ್ಕತಾ ಪೊಲೀಸರ ತಂಡವು ಐದು ಜನರನ್ನು ತಡೆದು 75 ಲಕ್ಷ ರೂ. ವಶಪಡಿಸಿಕೊಂಡಿದೆ. ಆ ಹಣಕ್ಕೆ ಅವರು ಯಾವುದೇ ದಾಖಲೆ ನೀಡಿಲ್ಲ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ 2021: ಡೆಲ್ಲಿಯನ್ನು ಮಣಿಸಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!
ಮತದಾನದ ಸಮಯದಲ್ಲಿ ಹಣ, ಮಾದಕ ವಸ್ತುಗಳಿಂದ ಮತದಾರರಿಗೆ ಪ್ರಚೋದನೆ ಮಾಡಲು ಅಭ್ಯರ್ಥಿಗಳು ಮಾಡುವ ತಂತ್ರಗಳ ಮೇಲೆ ಕಣ್ಣಿಡುವ ಸಲುವಾಗಿ ಚುನಾವಣಾ ಆಯೋಗ ಎಸ್ಎಸ್ಟಿಯನ್ನು ರೂಪಿಸಿದೆ.
ಬಂಗಾಳದಲ್ಲಿ ಈವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿದೆ. ಎಂಟನೇ ಮತ್ತು ಅಂತಿಮ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದೆ. ಮತ ಎಣಿಕೆ ಕಾರ್ಯ ಮೇ 2ರಂದು ನಿಗದಿಯಾಗಿದೆ.