ನವದೆಹಲಿ: ನಿಷೇಧದ ನಡುವೆಯೂ ಜನರು ಪಟಾಕಿ ಸಿಡಿಸುವುದು ಹೇಗೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಪಟಾಕಿ ಸಿಡಿಸುವವರ ವಿರುದ್ಧದ ಪ್ರಕರಣಗಳು ಪರಿಹಾರವಲ್ಲ, ಬದಲಿಗೆ ಮೂಲವನ್ನು ಹುಡುಕಿ ಕ್ರಮ ಕೈಗೊಳ್ಳಿ ಎಂದು ಒತ್ತಿ ಹೇಳಿದೆ.
ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಎಂಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠವು, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಐಶ್ವರ್ಯಾ ಭಾಟಿ ಅವರಿಗೆ, ಸರ್ಕಾರದಿಂದ ನಿಷೇಧ ಹೇರಿದಾಗ ಅದು ಸಂಪೂರ್ಣ ನಿಷೇಧ ಎಂದರ್ಥ. ಪಟಾಕಿ ಸಿಡಿಸಲು ನಿಷೇಧವಿದೆ. ನಮಗೆ ಹಸಿರು ಮತ್ತು ಕಪ್ಪು ಪಟಾಕಿ ಇದರ ವ್ಯತ್ಯಾಸವೇ ಅರ್ಥವಾಗುತ್ತಿಲ್ಲ" ಎಂದು ಹೇಳಿದೆ.
ಪಟಾಕಿ ಮಾರಾಟಗಾರರಿಗೆ ಪರವಾನಗಿ ನೀಡುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ. ದೆಹಲಿ ಪೊಲೀಸರು ತಾತ್ಕಾಲಿಕ ಪರವಾನಗಿ ನೀಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಸರ್ಕಾರಕ್ಕೆ ಸೂಚಿಸಿದೆ. ಐಶ್ವರ್ಯಾ ಭಾಟಿ ಅವರು ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಮತ್ತು ದೆಹಲಿ ಪೊಲೀಸರನ್ನು ಪ್ರತಿನಿಧಿಸಿದರು. ಹಸಿರು ಪಟಾಕಿ ಸಿಡಿಸುವುದನ್ನು ಕೇಂದ್ರ ಬೆಂಬಲಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಪಟಾಕಿ ಸಿಡಿಸುವವರ ವಿರುದ್ಧದ ಪ್ರಕರಣಗಳು ಪರಿಹಾರವಾಗುವುದಿಲ್ಲ. ನೀವು ಮೂಲವನ್ನು ಹುಡುಕಿ ಕ್ರಮ ಕೈಗೊಳ್ಳಬೇಕು ಎಂದು ಪೀಠವು ಎಎಸ್ಜಿಗೆ ತಿಳಿಸಿದೆ. ಸರ್ಕಾರ ಇದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕು. ಜನರು ಪಟಾಕಿ ಸಿಡಿಸಿದ ನಂತರ ಕ್ರಮ ಕೈಗೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ನ್ಯಾಯಮೂರ್ತಿ ಸುಂದ್ರೇಶ್ ಹೇಳಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸ್ಫೋಟ, ಸಾವು ಪ್ರಕರಣಗಳು: ಎನ್ಎಸ್ಜಿ ಮಾಜಿ ಅಧಿಕಾರಿ ಮಾಹಿತಿ
ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 2018ರ ಸುಪ್ರೀಂ ಕೋರ್ಟ್ ಆದೇಶದ ನಂತರ ಸಾಂಪ್ರದಾಯಿಕ ಪಟಾಕಿಗಳನ್ನು ನಿಷೇಧಿಸಲಾಗಿದೆ. ಸಾಕಷ್ಟು ಸಂಶೋಧನೆಗಳನ್ನು ಮಾಡಲಾಗಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಅನುಮತಿಸಲಾಗಿದೆ. 2016ರಿಂದ ಪಟಾಕಿ ಮಾರಾಟಕ್ಕೆ ಯಾವುದೇ ಪರವಾನಗಿ ನೀಡಲಾಗಿಲ್ಲ. ಹಸಿರು ಪಟಾಕಿಗಳಿಗೆ ತಾತ್ಕಾಲಿಕ ಪರವಾನಗಿಗಳನ್ನು ನೀಡಲಾಗಿದೆ ಎಂದು ಐಶ್ವರ್ಯಾ ಭಾಟಿ ಸುಪ್ರೀಂ ಕೋರ್ಟ್ಗೆ ಸ್ಪಷ್ಟಪಡಿಸಿದರು. ಸರ್ಕಾರ ಯಾವಾಗ ಸಂಪೂರ್ಣ ನಿಷೇಧ ಹೇರುತ್ತದೆಯೋ, ಆ ಸಂದರ್ಭದಲ್ಲಿ ಈ ಲೈಸೆನ್ಸ್ಗಳನ್ನು ಕೂಡ ಅಮಾನತುಗೊಳಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ಹಬ್ಬದ ಸೀಸನ್ ಸಮೀಪಿಸುತ್ತಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಸಂಪೂರ್ಣ ಪಟಾಕಿ ನಿಷೇಧದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕ್ರಿಯಾ ಯೋಜನೆ ಕುರಿತು ಪೀಠವು ಭಾಟಿ ಅವರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅವರು, ಪಟಾಕಿಗಳ ಮಾರಾಟ, ಸಂಗ್ರಹಣೆ ಮತ್ತು ಸಿಡಿಸುವಿಕೆಯನ್ನು ಪರಿಶೀಲಿಸಲು ಪೊಲೀಸರು ಠಾಣೆವಾರು ತಂಡಗಳನ್ನು ರಚಿಸಲಾಗುವುದು. ಮಾರುಕಟ್ಟೆ ಸ್ಥಳಗಳು ಮತ್ತು ಇತರ ಪ್ರದೇಶಗಳ ಯಾದೃಚ್ಛಿಕ ತಪಾಸಣೆಗಾಗಿ ಫ್ಲೈಯಿಂಗ್ ಸ್ವಾಡ್ಗಳು ಇರುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: ದೀಪಾವಳಿಯಲ್ಲಿ ಪಟಾಕಿ ಸಿಡಿಸಲು ಅನುಮತಿ: ಮಸೂದೆಗೆ ಯುಎಸ್ ಸೆನೆಟ್ ಅಂಗೀಕಾರ