ಶಿಮ್ಲಾ(ಹಿಮಾಚಲ ಪ್ರದೇಶ): ದೇಶದ ವಿವಿಧ ರಾಜ್ಯಗಳ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಅಕ್ಟೋಬರ್ 30ರಂದು ಮತದಾನ ನಡೆಯಲಿದೆ. ಇದರ ಮಧ್ಯೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಾಲಿವುಡ್ ನಟಿ ಕಂಗನಾ ರಣಾವತ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು, ಕೆಲ ಗಂಟೆಗಳ ಕಾಲ ಜನರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಭಾರತೀಯ ಜನತಾ ಪಾರ್ಟಿ ಹೈಕಮಾಂಡ್ನಿಂದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗುವುದಕ್ಕೂ ಮುಂಚಿತವಾಗಿ ಕಂಗನಾ ರಣಾವತ್ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಕಲಿ ಪಟ್ಟಿ ರಿಲೀಸ್ ಆಗಿದೆ. ಬಿಜೆಪಿ ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೋಷಣೆ ಮಾಡದ ಕಾರಣ ನಟಿ ಸ್ಪರ್ಧೆ ಮಾಡುತ್ತಿರುವ ಸುದ್ದಿ ನಿಜವೆಂದು ಅನೇಕರು ನಂಬಿದ್ದಾರೆ.
ಆದರೆ, ಮಂಡಿ ಸಂಸದೀಯ ಕ್ಷೇತ್ರಕ್ಕಾಗಿ ಕಾರ್ಗಿಲ್ ಹೀರೋ ಬ್ರಿಗೇಡಿಯರ್ ಕುಶಾಲ್ ಠಾಕೂರ್ ಹೆಸರು ಬಿಜೆಪಿ ಅಂತಿಮಗೊಳಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ಉಸ್ತುವಾರಿ ಕರಣ್ ನಂದಾ, ನಕಲಿ ಪಟ್ಟಿ ರಿಲೀಸ್ ಆಗಿದ್ದು, ಅದು ಅಧಿಕೃತವಲ್ಲ. ನಕಲಿ ಪಟ್ಟಿ ರಿಲೀಸ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು, ಈಗಾಗಲೇ ಸೈಬರ್ ಸೆಲ್ಗೆ ದೂರು ನೀಡಿದ್ದಾರೆ. ಮಂಡಿ ಕ್ಷೇತ್ರದ ಸಂಸದರಾಗಿದ್ದ ರಾಮ್ ಸ್ವರೂಪ್ ಕಳೆದ ಮಾರ್ಚ್ ತಿಂಗಳಲ್ಲಿ ನಿಧನರಾಗಿರುವ ಕಾರಣ ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ.
ಇದನ್ನೂ ಓದಿರಿ: ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟ: ಕಾದಂಬರಿಕಾರ ಅಬ್ದುಲ್ರಜಾಕ್ ಗುರ್ನಾಹ್ಗೆ ಪ್ರಶಸ್ತಿ
ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಕಂಗನಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಭೇಟಿ ಮಾಡಿದ್ದರು. ಹೀಗಾಗಿ ಕೆಲವೊಂದು ಊಹಾಪೋಹಗಳು ಹಬ್ಬಿದ್ದವು. ಆದರೆ, ಇದರ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ನಟಿ, ರಾಜಕೀಯ ಪ್ರವೇಶ ಮಾಡುವ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.
ಈ ಹಿಂದೆ 2019ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಸಹ ಕಂಗನಾ ಹೆಸರು ಇರುವ ಪಟ್ಟಿ ರಿಲೀಸ್ ಆಗಿತ್ತು. ಈ ವೇಳೆ ರಾಮಸ್ವರೂಪ್ ಶರ್ಮಾ ಅವರಿಗೆ ಮಂಡಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಈ ವೇಳೆ ಕೂಡ ಎಫ್ಐಆರ್ ದಾಖಲು ಮಾಡಲಾಗಿತ್ತು. ಮೂಲತಃ ಹಿಮಾಚಲ ಪ್ರದೇಶದವರಾಗಿರುವ ಕಂಗನಾ ರಣಾವತ್, ಬಿಜೆಪಿಯ ವಿಚಾರಧಾರೆಗಳ ಜೊತೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿ ಮಣೆ ಹಾಕಬಹುದು ಎಂಬ ಮಾತು ಕೇಳಿ ಬಂದಿದ್ದವು.