ಅಯೋಧ್ಯಾ( ಉತ್ತರಪ್ರದೇಶ): ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಕೆಲವೊಂದು ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ನೆಲ ಅಂತಸ್ತಿನ ಕಾಮಗಾರಿ ಕೂಡ ಭಾಗಶಃ ಪೂರ್ಣಗೊಂಡಿದ್ದು, ಸದ್ಯ ಮಂದಿರದ ಮುಖ್ಯ ದ್ವಾರದ ಮುಂಭಾಗದಲ್ಲಿ ಹಾಕಲಾಗುತ್ತಿರುವ ಮೆಟ್ಟಿಲುಗಳ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಮೆಟ್ಟಿಲುಗಳ ಮೇಲೆ ಅಮೃತಶಿಲೆ ಹಾಕುವ ಕೆಲಸ ಈಗ ಭರದಿಂದ ಸಾಗುತ್ತಿದೆ. ದೇವಸ್ಥಾನದ ಎಲ್ಲ ಬಾಗಿಲುಗಳ ಕಾರ್ಯ ಕೂಡ ಅಂತಿಮ ಹಂತಕ್ಕೆ ಬಂದಿದೆ.

ಮಹಾರಾಷ್ಟ್ರದಿಂದ ಆಮದು ಮಾಡಿಕೊಂಡಿರುವ ತೇಗದ ಮರದಿಂದ ಈ ಬಾಗಿಲುಗಳನ್ನು ತಯಾರಿಸಲಾಗುತ್ತಿದ್ದು, ಅವುಗಳನ್ನು ಅಳವಡಿಸುವ ಕಾರ್ಯ ಕೂಡ ಪ್ರಾರಂಭಿಸಲಾಗಿದೆ. ಈ ಬಾಗಿಲುಗಳ ಮೇಲೆ ಸುಂದರವಾದ ವಿಷ್ಣು ಕಮಲ, ಭವ್ಯತೆಯನ್ನು ಸೂಚಿಸುವ ಗಜ (ಆನೆ), ಸ್ವಾಗತ ಭಂಗಿಯಲ್ಲಿ ದೇವಿ ಸೇರಿದಂತೆ ಆಕರ್ಷಕ ಕೆತ್ತನೆಗಳ ಭಕ್ತರ ಗಮನ ಸೆಳೆಯುತ್ತಿದೆ. ರಾಮಮಂದಿರದಲ್ಲಿ 42 ಬಾಗಿಲುಗಳನ್ನು ಅಳವಡಿಸಲಾಗುತ್ತಿದ್ದು, ಈ ಎಲ್ಲ ಬಾಗಿಲುಗಳಲ್ಲಿ ಅರಳಿದ ಈ ಭವ್ಯ ಕಲೆ ಭಕ್ತರನ್ನು ಆಕರ್ಷಿಸುವಂತೆ ಕೆತ್ತನೆ ಮಾಡಲಾಗಿದೆ. ಪ್ರಗತಿಯಲ್ಲಿರುವ ಈ ಕೆಲಸ ಪೂರ್ಣಗೊಂಡ ತಕ್ಷಣ ರಾಮ್ ಲಲ್ಲಾ ಗರ್ಭಗುಡಿಗೆ ತೆರಳುವ ಎಲ್ಲಾ ಮಾರ್ಗಗಳು ತೆರವುಗೊಳ್ಳಲಿವೆ ಎಂದು ದೇವಸ್ಥಾನ ಟ್ರಸ್ಟಿ ಹೇಳಿಕೊಂಡಿದೆ.

ನೆಲಮಹಡಿಯಲ್ಲಿ ಇನ್ನೂ ಕೆಲವು ಬಾಗಿಲುಗಳನ್ನು ಅಳವಡಿಸಬೇಕಿದ್ದು, ಇದನ್ನು ಕುಶಲಕರ್ಮಿಗಳು ಸಿದ್ಧಪಡಿಸುತ್ತಿದ್ದಾರೆ. ದೇವಾಲಯದ ನೆಲ, ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಒಟ್ಟು 42 ಬಾಗಿಲುಗಳನ್ನು ಅಳವಡಿಸಬೇಕಿದ್ದು, ಇದರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ರಾಮ ಮಂದಿರದ ನಿರ್ಮಾಣ ಕಾರ್ಯ ಭಾಗಶಃ ಪೂರ್ಣಗೊಂಡಿದೆ. ಶೇ. 95 ರಷ್ಟು ನೆಲ ಅಂತಸ್ತಿನ ನಿರ್ಮಾಣ ಕಾರ್ಯ ಮುಗಿದಿದೆ. ಮೊದಲ ಮಹಡಿಯಲ್ಲಿ ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಡಿಸೆಂಬರ್ ವೇಳೆಗೆ ಶೇಕಡಾ 70 ಕ್ಕಿಂತ ಹೆಚ್ಚು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಂತಿಮ ಹಂತದ ಫ್ಲೋರಿಂಗ್ ಮತ್ತು ಫಿನಿಶಿಂಗ್ ಕೆಲಸ ಮಾತ್ರ ನಡೆಯುತ್ತಿದೆ. ಮೊದಲ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯವೂ ವೇಗ ಪಡೆದುಕೊಂಡಿದೆ. ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಇಲ್ಲಿಯವರೆಗೆ ಸುಮಾರು 900 ಕೋಟಿ ರೂ. ಖರ್ಚು ಮಾಡಲಾಗಿದೆ. ಸದ್ಯದಲ್ಲೇ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗುವುದು ಎಂದು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಭಗವಾನ್ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಿದ್ಧತೆಗಳು ಕೂಡ ಭರದಿಂದ ಸಾಗಿವೆ. ಕಾರ್ಯಕ್ರಮದ ಶಂಕುಸ್ಥಾಪನೆಯ ದಿನಾಂಕವನ್ನೂ ಅಂತಿಮಗೊಳಿಸಲಾಗಿದೆ. ಜನವರಿ 22 ರಂದು ಭಗವಾನ್ ರಾಮನು ಹೊಸದಾಗಿ ನಿರ್ಮಿಸಿದ ದೇವಾಲಯದಲ್ಲಿ ಅದ್ಧೂರಿಯಾಗಿ ವಿರಾಜಮಾನವಾಗಲಿದ್ದಾನೆ. ಈ ಹಬ್ಬವು ಜನವರಿ 20 ರಿಂದ ಪ್ರಾರಂಭವಾಗಿ ಜನವರಿ 24ರ ವರೆಗೆ ಮುಂದುವರಿಯುತ್ತದೆ.

ಜನವರಿ 26 ರಿಂದ ನೂತನವಾಗಿ ನಿರ್ಮಿಸಲಾಗಿರುವ ರಾಮ ಮಂದಿರವನ್ನು ರಾಮಭಕ್ತರ ದರ್ಶನಕ್ಕೆ ತೆರೆಯಲಾಗುವುದು. ಶ್ರೀರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗವಹಿಸಲು ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟದ ಎಲ್ಲಾ ಸಚಿವರು ಹಾಗೂ ಮುಖ್ಯಮಂತ್ರಿಗಳು ಹಾಗೂ ಸಚಿವರು ಭಗವಾನ್ ರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ರಾಮಭಕ್ತರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಅಯೋಧ್ಯೆಯಲ್ಲಿ ದೇಶೀಯ ವಿಮಾನಗಳ ಹಾರಾಟ ಶುರು