ಗ್ವಾಲಿಯರ್( ಮಧ್ಯಪ್ರದೇಶ): ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಪರಿಸರ ಕಾಳಜಿ ಉದ್ದೇಶದಿಂದ, ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ನಗರದಾದ್ಯಂತ ಕ್ಯಾರಿ ಬ್ಯಾಗ್ ಬ್ಯಾಂಕ್ಗಳನ್ನು ತೆರೆಯಲು ಸಜ್ಜಾಗಿದೆ. ಪ್ಲಾಸ್ಟಿಕ್ ಮತ್ತು ಪಾಲಿಥೀನ್‌ಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಮಹಿಳೆಯರು ಈ ಕ್ಯಾರಿ ಬ್ಯಾಗ್‌ಗಳನ್ನು ತಯಾರಿಸುತ್ತಾರೆ.
ಈ ಸ್ವಸಹಾಯ ಸಂಘಗಳು ಉತ್ಪಾದಿಸುವ ಹತ್ತಿ ಚೀಲಗಳನ್ನು ಜಿಎಂಸಿ ಖರೀದಿಸಲಿದೆ. ಮುಂದಿನ ವಾರದಿಂದ ನಗರದಲ್ಲಿ ಕ್ಯಾರಿ ಬ್ಯಾಗ್ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ ಎಂದು ನಿರೀಕ್ಷಿಸಲಾಗಿದೆ.
ಪ್ಲಾಸ್ಟಿಕ್: ಆರೋಗ್ಯ ಮತ್ತು ನಗರಗಳ ಪಾಲಿನ ಶತ್ರು:
ಪ್ಲಾಸ್ಟಿಕ್ ಮತ್ತು ಪಾಲಿಥೀನ್ ಸೇವನೆಯಿಂದ ಗ್ವಾಲಿಯರ್‌ನಲ್ಲಿ ಅನೇಕ ಪ್ರಾಣಿಗಳು ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿವೆ. ಕೆಲವೊಮ್ಮೆ ಪಾಲಿಥೀನ್ ,ಪ್ಲಾಸ್ಟಿಕ್ಗಳು ಚರಂಡಿಯಲ್ಲಿ ಸಂಗ್ರಹವಾಗಿ ಒಳಚರಂಡಿ ವ್ಯವಸ್ಥೆ ಹಾಳಾಗಲು ಸಹ ಕಾರಣವಾಗುವ ಹಿನ್ನೆಲೆ ನಗರಸಭೆ ಬ್ಯಾಗ್ ಬ್ಯಾಂಕ್ ತೆರೆಯಲು ನಿರ್ಧರಿಸಿದೆ.
ಈ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ತಯಾರಿಸುವವರು ಯಾರು?
ಸ್ವಸಹಾಯ ಗುಂಪುಗಳ ಮಹಿಳೆಯರು ಈ ಹತ್ತಿ ಚೀಲಗಳನ್ನು ತಯಾರಿಸಲಿದ್ದು, ಅವುಗಳನ್ನು ಮಹಾನಗರ ಪಾಲಿಕೆ ಖರೀದಿಸುತ್ತದೆ. ಆದರೆ, ಈ ಕ್ಯಾರಿ ಚೀಲಗಳ ಮಾರಾಟ ಮತ್ತು ಖರೀದಿ ಬೆಲೆಯನ್ನು ನಿಗಮ ಇನ್ನೂ ನಿರ್ಧರಿಸಿಲ್ಲ. ನಿಗಮವು ಜನರಿಗೆ ಈ ಚೀಲಗಳನ್ನು ಅಗ್ಗದ ದರದಲ್ಲಿ ಒದಗಿಸಿದರೆ ಮಾತ್ರ ಅಭಿಯಾನದ ಉದ್ದೇಶ ಸಾಧಿಸಿದಂತಾಗುತ್ತದೆ.
ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ:
ಬ್ಯಾಗ್ ಬ್ಯಾಂಕುಗಳನ್ನು ತೆರೆಯುವುದು ಸ್ವ-ಸಹಾಯ ಗುಂಪುಗಳನ್ನು ಸ್ಥಾಪಿಸಿಕೊಂಡಿರುವ ಅನೇಕ ಮಹಿಳೆಯರಿಗೆ ಪಾಲಿಗೆ ವರದಾನವಾಗಲಿದ್ದು ಸಾಕಷ್ಟು ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ. ಈ ಪ್ರಾಯೋಗಿಕ ಯೋಜನೆಯ ಯಶಸ್ಸಿನ ನಂತರ, ನಗರದ ವಿವಿಧ ಸ್ಥಳಗಳಲ್ಲಿ ಬ್ಯಾಗ್ ಬ್ಯಾಂಕ್ ಸ್ಥಾಪಿಸಲಾಗುವುದು. ಮೊದಲ ಬ್ಯಾಗ್ ಬ್ಯಾಂಕ್‌ಗೆ ಪ್ರಸ್ತುತ, 50 ಮಹಿಳೆಯರನ್ನು ಸೇರಿಸಿಕೊಳ್ಳಲಾಗಿದೆ.
ಎಲ್ಲೆಡೆ ಕ್ಯಾರಿ ಬ್ಯಾಗ್‌ಗಳನ್ನು ಒಯ್ಯುವುದು ದೊಡ್ಡ ಸವಾಲು:
ನಗರಸಭೆ ಆಯುಕ್ತ ಶಿವಂ ವರ್ಮಾ ಈ ಕುರಿತು ಮಾತನಾಡಿ, ನಗರದಲ್ಲಿರುವ ವ್ಯಾಪಾರ ಸಂಸ್ಥೆಗಳೊಂದಿಗೆ ಈ ಹತ್ತಿ ಚೀಲಗಳನ್ನು ಪೂರೈಸುವ ಕುರಿತು ಚರ್ಚೆ ನಡೆಸಲಾಗುವುದು. ಚರ್ಚೆಯ ನಂತರ, ಮಾರ್ಕೆಟಿಂಗ್ ಯೋಜನೆ ಸಹ ತಯಾರಿಸಲಾಗುತ್ತದೆ. ಪ್ರತಿಯೊಂದು ಕೈಗೂ ಈ ಹತ್ತಿ ಚೀಲಗಳನ್ನು ತಲುಪಿಸುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ರು.
‘ಬ್ಯಾಗ್ ಬ್ಯಾಂಕ್’ ಯಶಸ್ಸು ಎರಡು ವಿಷಯಗಳ ಮೇಲೆ ಅವಲಂಬಿತವಾಗಿದೆ:
ಬ್ಯಾಗ್ ಬ್ಯಾಂಕಿನ ಯಶಸ್ಸು ಎರಡು ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಮೊದಲನೆಯದಾಗಿ, ಇದು ಪ್ರತಿಯೊಂದು ಕೈಗೂ ಲಭ್ಯವಿರಬೇಕು ಮತ್ತು ಎರಡನೆಯದಾಗಿ, ಅದರ ಬೆಲೆ ಪ್ರತಿಯೊಬ್ಬ ನಾಗರಿಕರಿಗೂ ಕೈಗೆಟುಕುವಂತಿರಬೇಕು. ಪುರಸಭೆಯ ಈ ಯೋಜನೆ ಪರಿಣಾಮಕಾರಿ ಎಂದು ಸಾಬೀತುಪಡಿಸಿದರೆ, ಅದು ಪರಿಸರಕ್ಕೆ ಮಾತ್ರವಲ್ಲದೇ ಮನುಷ್ಯನಿಗೂ ವರದಾನವಾಗಲಿದೆ.