ತಿರುವಣ್ಣಮಲೈ (ತಮಿಳುನಾಡು): ಇಲ್ಲಿನ ಪಕ್ಕಿರಿಪಾಳ್ಯಂ ಬಳಿಯ ತಿರುವಣ್ಣಮಲೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಕಾರು-ಲಾರಿ ಡಿಕ್ಕಿಯಾಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು, ನಾಲ್ವರು ಪುರುಷರು, ಓರ್ವ ಮಹಿಳೆ ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಿಎಂ ಎ.ಕೆ.ಸ್ಟಾಲಿನ್ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ, ಪರಿಹಾರ ಘೋಷಿಸಿದ್ದಾರೆ.
ಕರ್ನಾಟಕ ನೋಂದಣಿ ಸಂಖ್ಯೆಯ ಕಾರೊಂದು ತಿರುವಣ್ಣಮಲೈನಿಂದ ಬೆಂಗಳೂರು ಕಡೆಗೆ ತಿರುವಣ್ಣಮಲೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ತಿರುವಣ್ಣಮಲೈ ಜಿಲ್ಲೆಯ ಪಕ್ಕಿರಿಪಾಳ್ಯಂ ಪಂಚಾಯತ್ನ ಬಳಿ ಎದುರಿನಿಂದ ಬಂದ ಲಾರಿಗೆ ಕಾರು ಮುಖಾಮುಖಿ ರಭಸವಾಗಿ ಡಿಕ್ಕಿಯಾಗಿದೆ. ಅಪಘಾತಕ್ಕೀಡಾದ ಲಾರಿ ಸಿಂಗಾರಪೇಟೆಯಿಂದ ತಿರುವಣ್ಣಮಲೈ ಕಡೆಗೆ ಬರುತ್ತಿತ್ತು.ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನಿಂದ ಕಾರಿನೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶವಗಳನ್ನು ಚೆಂಗಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತಕ್ಕೆ ನಿಜವಾದ ಕಾರಣ ಸ್ಪಷ್ಟವಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪರಿಹಾರ ಘೋಷಿಸಿದ ಸಿಎಂ ಸ್ಟಾಲಿನ್: ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, "ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಅಪಘಾತದ ಸುದ್ದಿ ತಿಳಿದು ದು:ಖವಾಯಿತು. ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ್ದು, ದುರಂತ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ" ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭಕ್ತರ ಸಾವು: ಇಲ್ಲಿನ ವೈಜಾಪುರ ಸಮೀಪದ ಸಮೃದ್ಧಿ ಹೆದ್ದಾರಿಯಲ್ಲಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಗು ಸೇರಿದಂತೆ ಒಟ್ಟು 12 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. 20ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವೈಜಾಪುರ ಮತ್ತು ಚಿ. ಸಂಭಾಜಿನಗರದ ಘಾಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಇಲ್ಲಿನ ಸೈಲಾನಿ ಬಾಬಾ ದರ್ಶನಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಂಜಾಬ್: ಜಾತ್ರೆಯಲ್ಲಿ ಉಯ್ಯಾಲೆಯ ಹಗ್ಗ ತುಂಡಾಗಿ ಇಬ್ಬರು ಬಾಲಕರು ಸಾವು